ಚಿತ್ರರಂಗದಲ್ಲಿ ಎಲ್ಲಿಯ ತನಕ ಪುರುಷ ಯಾಜಮಾನ್ಯ ಇರುತ್ತದೋ, ಎಲ್ಲಿಯತನಕ ನಟಿಯರು ದೇಹ ಪ್ರದರ್ಶನಕ್ಕೆ ಸೀಮಿತರಾಗಿರುತ್ತಾರೋ, ಅಲ್ಲಿಯತನಕ ಲೈಂಗಿಕ ಕಿರುಕುಳ ವಿರೋಧಿ ಅಭಿಯಾನಗಳು ಬರೀ ಗದ್ದಲವೆನಿಸುತ್ತವೆ; ಮತ್ತೆ ಮತ್ತೆ ಹುಟ್ಟಿಸಾಯುತ್ತಲೇ ಇರುತ್ತವೆ.

ಚಿತ್ರರಂಗದಲ್ಲಿ ಮೀಟೂ ಅಲೆ ಇಳಿಮುಖವಾಗುತ್ತಿರುವ ಹಂತದಲ್ಲಿ ನಟಿ ಸಂಜನಾ ತನ್ನ ಮೀಟೂ ಆರೋಪಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ನಮ್ಮ ನಟಿಯರು ಹೀಗೆ ಹೇಳಿಕೆ ಕೊಡುವುದು, ಬಳಿಕ ತಮ್ಮ ಹೇಳಿಕೆಗೆ ತಾವೇ ಕ್ಷಮಾಪಣೆ ಕೇಳುವುದು ಇವೆಲ್ಲ ರೋಗಲಕ್ಷಣ (ಸಿಂಪ್ಟಮ್‌)ಗಳಾಗಿವೆ. ನಮ್ಮ ಚಿತ್ರರಂಗದಲ್ಲಿ ಎಲ್ಲವೂ ಸರಿಯಿಲ್ಲ, ಇದು ರೋಗಗ್ರಸ್ತ ಸ್ಥಿತಿಯಲ್ಲಿ ನವೆಯುತ್ತಿದೆ ಎಂಬುದರ ಸೂಚನೆಯಾಗಿದೆ. ಅಮೆರಿಕದ ಚಿತ್ರ ನಿರ್ಮಾಪಕ ಹಾರ್ವೇ ವೇನ್‌ಸ್ಟೇನ್‌ನ ಲೈಂಗಿಕ ದೌರ್ಜನ್ಯದ ಬಗ್ಗೆ ಅಲ್ಲಿಯ ಸುಮಾರು 80ಕ್ಕೂ ಅಧಿಕ ನಟಿಯರು ಧ್ವನಿಯೆತ್ತಿದಾಗ ಅದು ಮೀಟೂ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತು. ವೇನ್‌ಸ್ಟೇನ್‌ ತನ್ನ ಸಾರ್ವಜನಿಕ ಬದುಕಿನಿಂದ ಶಾಶ್ವತವಾಗಿ ಹಿಂದಕ್ಕೆ ಸರಿಯುವಂತೆ ಮಾಡಿತು.

ಬಂಡಾಯದ ಅನುಕರಣೆ ಸಾಧ್ಯವೇ?

ಪಶ್ಚಿಮದಲ್ಲಿ ಯಾರೋ ಇಂಥದೊಂದು ಅಭಿಯಾನ ನಡೆಸಿದ್ದಾರೆ, ಆದ್ದರಿಂದ ನಾನೂ ನಡೆಸಿ ಜಯಿಸುತ್ತೇನೆ ಎನ್ನುವ ಪ್ರವೃತ್ತಿಯನ್ನು ಜಾಣ್ಮೆ ಎನ್ನಬಹುದೇ ವಿನಃ ಬಂಡಾಯ ಅಥವಾ ವಿದ್ರೋಹವೆಂದು ಕರೆಯಲಾಗದು. ಕಲಾಭಿವ್ಯಕ್ತಿಗಾಗಿ ಅನುಕರಣೆಯ ಮೊರೆ ಹೋಗುವುದು ಸರಿ. ಆದರೆ ವ್ಯಕ್ತಿಯ ಒಡಲಾಳದಿಂದ ಹೊಮ್ಮುವ ಬಂಡಾಯವನ್ನೂ ಅನುಕರಣೆಯಿಂದ ಸಂಪಾದಿಸಿಕೊಳ್ಳಬೇಕಾದ ವಸ್ತುವಿನಂತೆ ಪರಿಭಾವಿಸಿದರೆ ಹೇಗೆ? ಕೆಲವು ಸಲ ನಮ್ಮ ಸುತ್ತಲಿನ ಹೆಣ್ಣುಮಕ್ಕಳ ಅಸಲಿ ಸಮಸ್ಯೆಯನ್ನು ಕಂಡರಿವ ಸಂವೇದನೆಯನ್ನೇ ಇಂತಹ ಅಭಿಯಾನಗಳ ಪರವಾಗಿ ಮಾತನಾಡುವವರು ಕಳೆದುಕೊಂಡಿರುತ್ತಾರೆ. ಭಾರತದಲ್ಲಿ ಪ್ರತಿನಿತ್ಯ ಸರಾಸರಿ 94 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ. ಹೀಗೆ ಅನಿರೀಕ್ಷಿತವಾಗಿ ದೌರ್ಜನ್ಯಕ್ಕೆ ಒಳಗಾಗುವ ಒಬ್ಬ ಮಹಿಳೆ ಯಾವುದೇ ಅಭಿಯಾನದ ಬೆಂಬಲಕ್ಕಾಗಿ ಕಾಯುವುದಿಲ್ಲ. ತತ್‌ಕ್ಷಣ ನಿರ್ಧಾರ ತೆಗೆದುಕೊಳ್ಳುತ್ತಾಳೆ. ನಿರ್ಧಾರ ತೆಗೆದುಕೊಳ್ಳಲಾಗದಿದ್ದರೂ ಅತ್ಯಾಚಾರ ನಡೆವ ಗಳಿಗೆಯಲ್ಲಿ ಕೊನೆಯ ಪಕ್ಷ ಧ್ವನಿಯೆತ್ತುತ್ತಾಳೆ, ಚೀರಾಡುತ್ತಾಳೆ, ಪ್ರತಿರೋಧಿಸುತ್ತಾಳೆ.

ಮೀಟೂ ವೈಫಲ್ಯಕ್ಕೆ ಕಾರಣ ಏನು

ದೌರ್ಜನ್ಯ ಎದುರಿಸುತ್ತಲೇ ನಮ್ಮ ಉಳಿವನ್ನು ಸ್ಥಾಪಿಸಿಕೊಳ್ಳಬೇಕಾದ ಒಂದು ಸನ್ನಿವೇಶದಲ್ಲಿ ನಾವು ನಮ್ಮ ಅಸಲಿ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಮತ್ತು ಸಮಸ್ಯೆಯ ಮೂಲವನ್ನು ತಲುಪಬೇಕಾಗುತ್ತದೆ. ಇವರು ಅನುಭವಿಸಿರುವ ಕಿರುಕುಳಕ್ಕಿಂತ ದುಪ್ಪಟ್ಟು ಮುಪ್ಪಟ್ಟು ಕಿರುಕುಳ ಅನುಭವಿಸಿರುವ ಅಸಹಾಯಕ ಹಲವು ಹಿರಿಯ ತಾರೆಯರು ಚಿತ್ರರಂಗದಲ್ಲಿದ್ದಾರೆ. ಅಂತಹ ಕಿರುಕುಳಗಳ ಬಗ್ಗೆ ಆಗ ಅವರು ಈಗಿನವರಂತೆ ಪ್ರತಿಭಟನೆ ನಡೆಸಿಲ್ಲದಿರಬಹುದು. ಆದರೆ ಹಲವು ಪತ್ರಿಕಾ ಸಂದರ್ಶನಗಳಲ್ಲಿ, ಆತ್ಮಕಥನಗಳಲ್ಲಿ ಅವರು ತಮಗಾದ ಕಿರುಕುಳದ ಬಗ್ಗೆ ಮುಕ್ತವಾಗಿಯೇ ಮಾತನಾಡಿದ್ದಾರೆ. ಅಂತಹ ದಮನಿತರ ಯಾತನೆಗೆ ಸ್ಪಂದಿಸುವ ಮತ್ತು ಅವರ ವಿಶ್ವಾಸ, ಬೆಂಬಲಗಳನ್ನು ಯಾಚಿಸುವ ಗೊಡವೆಗೆ ಹೋಗದಿರುವುದೂ ಇಂತಹ ಒಂದು ಚಳವಳಿಗಳ ವೈಫಲ್ಯಕ್ಕೆ ಕಾರಣವಾಗುತ್ತದೆ.

ಇಲ್ಲಿ ಮೀ ಎಂಬ ಪದವೇ ನನ್ನದು, ವೈಯಕ್ತಿಕವಾದುದು ಎಂಬ ಅರ್ಥ ನೀಡುತ್ತದೆ. ನಗರ ಕೇಂದ್ರಿತ ಸುಶಿಕ್ಷಿತ ಮಹಿಳೆಯರ ವ್ಯಕ್ತಿಗತ ಅಭಿಯಾನವನ್ನು ದೇಶದ ಸಮಸ್ತ ಹೆಣ್ಣುಮಕ್ಕಳ ಸಮಸ್ಯೆಯನ್ನು ಪ್ರತಿನಿಧಿಸುವ ಅಭಿಯಾನದಂತೆ ಬಿಂಬಿಸಿದ್ದು ‘ಮೀಟೂ’ ಅಭಿಯಾನದ ಸೋಲಿಗೆ ಕಾರಣವೆನಿಸುತ್ತದೆ. ಎಲ್ಲಕ್ಕಿಂತ ಮೀಗಿಲಾಗಿ, ದುಡಿಯುವ ಆದರೆ ಸೆಲೆಬ್ರೆಟಿಗಳಲ್ಲದ ನೂರಾರು ಹೆಣ್ಣುಮಕ್ಕಳು ಪ್ರತಿನಿತ್ಯ ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಮೀಟೂ ಕೊನೆಗೂ ಧ್ವನಿಯಾಗಲಿಲ್ಲ.

ನಟಿಯರೇಕೆ ಚಿರಯೌವನ ಬಯಸ್ತಾರೆ?

ಚಿತ್ರೀಕರಣದ ಸಮಯದಲ್ಲಿ ನಟಿಯರನ್ನು ಸಭ್ಯತನದಿಂದ ನಡೆಸಿಕೊಂಡರೆ ಸಾಕೇ? ತೆರೆಯ ಮೇಲೆ ಅಸಭ್ಯವಾಗಿ ತೋರಿಸುವುದಕ್ಕೆ ನಟಿಯರ ಒಪ್ಪಿಗೆಯಿದೆಯೇ? ಹಿರಿಯ ನಟರಾದ ನಾಸಿರುದ್ದೀನ್‌ ಶಾ, ಮೋಹನ್‌ಲಾಲ್‌, ರಜನಿಕಾಂತ್‌, ಅಮಿತಾಬ್‌ ಬಚ್ಚನ್‌ ಮುಂತಾದ ನಟರ ವಯಸ್ಸನ್ನು ನಿರ್ಲಕ್ಷಿಸಿ ಅವರ ಪ್ರತಿಭೆ ಸಾಮರ್ಥ್ಯಗಳಿಗೆ ಹೊಂದುವಂತಹ ಚಿತ್ರಕತೆ ಹೆಣೆಯುವ ಚಿತ್ರರಂಗದವರು, ಇದೇ ಪ್ರಯತ್ನವನ್ನು ಹಿರಿಯ ನಟಿಯರಿಗಾಗಿ ಮಾಡಿದ್ದಾರೆಯೇ? ಮೀಟೂ ಬೆಂಬಲಿಸುವ ಇಂದಿನ ನಟಿಯರು ಈ ತರಹದ ಪ್ರಶ್ನೆಗಳತ್ತ ಗಮನ ಹರಿಸಬೇಕು. ಅಂಬಿ ನಿಂಗೆ ವಯಸ್ಸಾಯ್ತೋ ಎಂಬ ಹೆಸರಿನ ಚಿತ್ರ ಬಂದರೂ ಒಬ್ಬ ನಟನ ಸ್ಟಾರ್‌ ವ್ಯಾಲ್ಯೂ ಕಡಿಮೆಯಾಗುವುದಿಲ್ಲ. ಅದೇ ಒಬ್ಬ ಹಿರಿಯ ನಟಿಯ ಹೆಸರಿನಲ್ಲಿ ಇಂತಹುದೇ ಶೀರ್ಷಿಕೆಯುಳ್ಳ ಚಿತ್ರ ಬಂದರೆ ಅವಳು ನಿಸ್ಸಂಶಯವಾಗಿ ಆಘಾತಕ್ಕೆ ಒಳಗಾಗಿ ತಲ್ಲಣಿಸುತ್ತಾಳೆ. ಈ ತಲ್ಲಣ ಅವಳು ಪುರುಷ ಪ್ರಣೀತವಾದ ಮೌಲ್ಯಗಳನ್ನು ಪ್ರಶ್ನಾತೀತವಾಗಿ ಸ್ವೀಕರಿಸಿದ್ದರ ದ್ಯೋತಕ.

ತನ್ನ ಹೆಸರಿನಲ್ಲಿ ಈ ತರಹದ ಶೀರ್ಷಿಕೆಯುಳ್ಳ ಚಿತ್ರ ಇನ್ನೆಲ್ಲಿ ತೆರೆ ಕಾಣುವುದೋ ಎಂದು ಹೆದರಿ ನಟಿ ಶ್ರೀದೇವಿ ಜೀವಿತವಿಡೀ ಚಿರಯೌವನೆಯಾಗೇ ಉಳಿಯಲು ಪ್ರಯತ್ನಿಸಿದಳು. ಚಿತ್ರರಂಗದಲ್ಲಿ ಬೇರೂರಿರುವ ಪುರುಷ ದುರಭಿಮಾನದ ಮೌಲ್ಯಗಳಿಗೆ- ಅಂದರೆ, ಹೆಣ್ಣು ಶಾರೀರಿಕ ಚೆಲುವನ್ನು ಪ್ರದರ್ಶಿಸುವ ಭೋಗದ ವಸ್ತು ಮಾತ್ರ ಎಂಬ ನಂಬಿಕೆಗೆ - ಒಲಿದಿದ್ದ ಪವೀರ್‍ನ್‌ ಬಾಬಿ ಹುಚ್ಚಾಸ್ಪತ್ರೆ ಸೇರಿದಳು. ಮೀನಾಕುಮಾರಿ ಮದ್ಯ ವ್ಯಸನಿಯಾದಳು, ಕಲ್ಪನಾ ಆತ್ಮಹತ್ಯೆ ಮಾಡಿಕೊಂಡಳು. ಚಿತ್ರರಂಗದ ಇತಿಹಾಸವನ್ನು ಅವಲೋಕಿಸಿದರೆ ಪುರುಷ ಕೇಂದ್ರಿತ ನಂಬಿಕೆ, ಧೋರಣೆಗಳಿಂದಾಗಿ ಸಂಭವಿಸಿದ ಇಂತಹ ದುರಂತಗಳ ನೂರಾರು ನಿದರ್ಶನಗಳು ಸಿಗುತ್ತವೆ. ಚಿತ್ರರಂಗದವರು ತಮ್ಮ ಶರೀರವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸಂಜನಾ, ಶ್ರುತಿ ಹರಿಹರನ್‌ ಮುಂತಾದವರು ಆರೋಪಿಸುತ್ತಿದ್ದಾರೆ. ಆದರೆ ಮೇಲಿನ ತರಹದ ಸಾವು, ಖಿನ್ನತೆ, ಮನೋಕ್ಷೋಭೆಗಳು ಇದನ್ನೂ ಮೀರಿ ದುರ್ಬಳಕೆಯಾಗಿವೆ, ಯಾವ ಕಾನೂನಿನ ಶಿಕ್ಷೆಗೂ ಅಳವಡದ ಪರಮಾಪರಾಧವಾಗಿದೆ.

ಚಿತ್ರರಂಗದ ಮನಸ್ಥಿತಿ ಬದಲಾಗಬೇಕು

ಹೆಣ್ಣಿನ ಶರೀರದೊಂದಿಗೆ ದುರ್ವರ್ತನೆ ಮಾಡುವುದು ಅಪರಾಧ ಸರಿ. ಆದರೆ ಅವಳ ಮನಸ್ಸು, ಅವಳ ವ್ಯಕ್ತಿತ್ವಗಳನ್ನು ನಿರ್ಲಕ್ಷಿಸಿ ಅವಳನ್ನು ಕೇವಲ ಶರೀರರೂಪಿ ಎಂಬಂತೆ ಬಿಂಬಿಸುವುದು ಅದಕ್ಕಿಂತಲೂ ಮೀರಿದ ಅಪರಾಧ. ಮೊದಲ ಅಪರಾಧ ಕಾನೂನಿನ ವ್ಯಾಪ್ತಿಯೊಳಗೆ ಬರುತ್ತದೆ. ಆದರೆ ಎರಡನೆಯ ಅಪರಾಧ ಕಾನೂನು, ಕಟ್ಟಲೆಗಳ ಕೈಗೆಟುಕುವ ಸ್ವರೂಪದ್ದಲ್ಲ. ಮೀಟೂನಂತಹ ಅಭಿಯಾನಗಳು ಕಾನೂನಿನ ವ್ಯಾಪ್ತಿಯೊಳಗೆ ಬಾರದ ಈ ತರಹದ ಅಪರಾಧಗಳ ವಿರುದ್ಧ ಧ್ವನಿಯೆತ್ತಿ ಜಾಗೃತಿ ಮೂಡಿಸಬೇಕಾಗಿದೆ. ಹೆಣ್ಣನ್ನು ಶರೀರದ ಮಟ್ಟಿಗಷ್ಟೇ ಕಾಣುವ ಚಿತ್ರರಂಗದವರ ಮನಸ್ಥಿತಿಯನ್ನು ಬದಲಾಯಿಸಬೇಕಾದ ಹೊಣೆಗಾರಿಕೆ ಮೀಟೂ ಅಭಿಯಾನದವರ ಮೇಲಿದೆ. ಶರೀರವನ್ನು ಮೀರಿದ ಹೆಣ್ಣಿನ ವ್ಯಕ್ತಿತ್ವವನ್ನು ಕಾಣುವ ದೃಷ್ಟಿಚಿತ್ರರಂಗಕ್ಕೆ ಪ್ರಾಪ್ತಿಯಾದಾಗ ಈ ಲೈಂಗಿಕ ದೌರ್ಜನ್ಯ, ದುರ್ಬಳಕೆ ಇತ್ಯಾದಿಗಳು ತಾನಾಗೇ ಲಯವಾಗುತ್ತವೆ.

ಚಿತ್ರರಂಗದಲ್ಲಿ ಎಲ್ಲಿಯತನಕ ಪುರುಷ ಯಾಜಮಾನ್ಯವಿರುತ್ತದೋ, ಸದ್ಯಕ್ಕೆ ಎಲ್ಲಿಯತನಕ ನಮ್ಮ ನಟಿಯರು ದೇಹ ಪ್ರದರ್ಶನದ ಮಟ್ಟಿಗಷ್ಟೇ ಸೀಮಿತರಾಗಿರುತ್ತಾರೋ, ಅಲ್ಲಿಯ ತನಕ ಮೀಟೂ ತರಹದ ಅಭಿಯಾನಗಳು ಬರೀ ಗದ್ದಲವೆನಿಸುತ್ತವೆ; ಯಾವುದೇ ತಾರ್ಕಿಕ ಅಂತ್ಯ ಕಾಣದೆ ಮತ್ತೆ ಮತ್ತೆ ಹುಟ್ಟಿಸಾಯುತ್ತಲೇ ಇರುತ್ತವೆ.

-ಡಾ. ಟಿ.ಎನ್‌ ವಾಸುದೇವ ಮೂರ್ತಿ