Asianet Suvarna News Asianet Suvarna News

ಅಭಿಷೇಕ್ ಅಂಬರೀಶ್ ಸಂದರ್ಶನ : ಗೀತಾ ವಿಷ್ಣು ಕೇಸ್'ನಲ್ಲಿ ನನ್ನನ್ನೂ ಎಳೆದು ತಂದರು !

ಹಮ್ಮಿಲ್ಲದೆ ಮಾತನಾಡುವ ಲೈವ್ಲೀ ಹುಡುಗ. ಯಾವುದಕ್ಕೂ ಟೆನ್ಷನ್ ಮಾಡಿಕೊಳ್ಳದ ಹಸನ್ಮುಖಿ. ತನ್ನ ಬಗ್ಗೆ ತಾನೇ ತಮಾಷೆ ಮಾಡಿಕೊಂಡು ನಗುವ ಸರಳ ಜೀವಿ. ಈ ಹುಡುಗನ ಹೆಸರು ಅಭಿಷೇಕ್ ಅಂಬರೀಶ್. ತಂದೆ ಅಂಬರೀಶ್. ತಾಯಿ ಸುಮಲತಾ. ಇಬ್ಬರೂ ದೊಡ್ಡ ಸ್ಟಾರ್‌ಗಳು. ಆದರೂ ಅಭಿ ಅದನ್ನು ತೋರಿಸಿಕೊಂಡವರಲ್ಲ. ಸೂಪರ್‌ಸ್ಟಾರ್‌ಗಳ ಪರಿಚಯ ಇದ್ದರೂ ಅವರ ಜೊತೆ ಕಾಣಿಸಿಕೊಂಡಿದ್ದಿಲ್ಲ. ಸ್ಟಾರ್‌ಗಿರಿ ತೋರಿಸದೆ, ಏನೂ ಸುದ್ದಿ ಮಾಡದೆ, ಸದಾ ತೆರೆಮರೆಯಲ್ಲಿಯೇ ನಿಂತಿರುತ್ತಿದ್ದ ಈ ಸಿಂಪಲ್ ಸ್ಟಾರ್ ಈಗ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಈ ಬಗ್ಗೆ ಅಭಿಷೇಕ್ ಜೊತೆ ಮುಕ್ತ ಮಾತುಕತೆ.

Abishek Ambareesh Interview

1) ಯಾವಾಗ ಸಿನಿಮಾ ರಂಗಕ್ಕೆ ಬರುತ್ತೀರಿ?

ಅ: ಸಿನಿಮಾ ರಂಗಕ್ಕೆ ಬರುವುದಂತೂ ಗ್ಯಾರಂಟಿ. ಹಾಗಂತ ಅರ್ಜೆಂಟಿಲ್ಲ. ನಿಧಾನಕ್ಕೆ ಬರುತ್ತೇನೆ. ಚಿತ್ರರಂಗದಲ್ಲಿ ಏನಾದರೂ ಮಾಡಬೇಕು ಅನ್ನೋ ಆಸೆ ಇದೆ. ಅದಕ್ಕಾಗಿ ತಯಾರಾಗುತ್ತಿದ್ದೇನೆ. ತಡವಾಗಿಯಾದರೂ ಪರವಾಗಿಲ್ಲ. ಕರೆಕ್ಟಾಗಿ ಬರಬೇಕು. ಮೊದಲ ಸಿನಿಮಾ ಅನ್ನುವುದು ಲೈಫಲ್ಲಿ ಯಾವತ್ತೂ ಮೊದಲನೆಯದೇ. ಕಡೆಯವರೆಗೂ ಆ ಸಿನಿಮಾ ನನಗೆ ಸ್ಪೆಷಲ್. ಹಾಗಾಗಿ ಪೂರ್ತಿ ಶ್ರಮ ಹಾಕುತ್ತಿದ್ದೇನೆ. ಮಾರ್ಷಲ್ ಆರ್ಟ್ಸ್, ಫೈಟಿಂಗ್ ಕಲಿಯುತ್ತಿದ್ದೇನೆ. ನಟನಾ ತರಬೇತಿ ಪಡೆಯುತ್ತಿದ್ದೇನೆ.

2) ಹಾಗಾದರೆ ಶೀಘ್ರದಲ್ಲೇ ಇಂಟ್ರಡಕ್ಷನ್ ಇದೆ... ?

ಅ: ಅವಸರ ಇಲ್ಲ. ಇನ್ನೆರಡು ತಿಂಗಳು ಮಾರ್ಷಲ್ ಆರ್ಟ್ಸ್ ತರಬೇತಿ ಇದೆ. ಮುಂದಿನ ವರ್ಷ ಚಿತ್ರರಂಗಕ್ಕೆ ಎಂಟ್ರಿ.

3) ನೀವು ಯಾವತ್ತೂ ಸಿನಿಮಾ ರಂಗದ ಮಂದಿ ಜೊತೆ ಕಾಣಿಸಿಕೊಂಡವರಲ್ಲ, ಸಿನಿಮಾಸಕ್ತಿ ಹೇಳಿಕೊಂಡವರಲ್ಲ... ?

ಅ: ಓದುತ್ತಿದ್ದಾಗ ನನ್ನ ಗಮನ ಇದ್ದಿದ್ದು ಓದಿನಲ್ಲಿ ಮಾತ್ರ. ತಂದೆ, ತಾಯಿ ಕೂಡ ಸ್ಟ್ರಿಕ್ಟ್ ಆಗಿದ್ದರು. ಓದೋ ಟೈಮಲ್ಲಿ ಓದಬೇಕು, ಆಮೇಲೆ ಏನಾಗತ್ತೋ ನೋಡೋಣ ಎನ್ನುತ್ತಿದ್ದರು. ಆಗ ಯಾರಾದರೂ ಮನೆಗೆ ಬಂದು ಸಿನಿಮಾ ಅಂತ ಮಾತನಾಡಿದರೆ ಅಪ್ಪ ‘ಗುರ್’ ಅನ್ನುತ್ತಿದ್ದರು. ಈಗ ನನ್ನ ಓದು ಮುಗಿದಿದೆ. ಹೇಗೂ ಸಿನಿಮಾ ಕುಟುಂಬ ನನ್ನದು. ಸಿನಿಮಾದಲ್ಲಿ ಮುಂದುವರಿಯುವ ಉದ್ದೇಶ ಇದೆ.

4) ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯಬೇಕು ಅನ್ನಿಸಿದ್ದು ಯಾಕೆ?

ಅ: ಫಿಟ್‌ನೆಸ್‌ಗೆ. ನನಗೆ ಮಾರ್ಚ್ ತಿಂಗಳಲ್ಲಿ ಜಿಮ್‌ನಲ್ಲಿ ಎಕ್ಸರ್ಸೈಸ್ ಮಾಡುವಾಗ ಸ್ವಲ್ಪ ಸಮಸ್ಯೆಯಾಗಿ ಬೆನ್ನು ನೋವು ಉಂಟಾಗಿತ್ತು. ಮೂರು ತಿಂಗಳು ರೆಸ್ಟ್ ತಗೊಂಡೆ. ಆಮೇಲೆ ಎದ್ದು ಮಾರ್ಷಲ್ ಆರ್ಟ್ಸ್ ತರಬೇತಿಗೆ ಹೋದೆ. ಇದರ ಹಿಂದೆ ಇನ್ನೊಂದು ಉದ್ದೇಶವೂ ಇತ್ತು. ಮಾಧ್ಯಮದವರೆಲ್ಲಾ ಯಾವಾಗಲೂ ನಾನು ದಪ್ಪಗಿರುವ ಫೋಟೋಗಳನ್ನೇ ಹಾಕುತ್ತಿದ್ದರು. ನೋಡಿದರೆ ಒಂಥರಾ ಅನ್ನಿಸೋದು. ಇನ್ನು ಆ ಸಮಸ್ಯೆ ಇರಲ್ಲ.

5) ಗೀತಾ ವಿಷ್ಣು ಕೇಸ್‌ನಲ್ಲಿ ಕೆಲವು ಕಡೆ ನಿಮ್ಮ ಹೆಸರನ್ನು ಎಳೆದು ತರಲಾಯಿತು. ಬೇಜಾರಾಯಿತಾ?

ಅ: ಬೇಜಾರಾಗದೆ ಇರತ್ತಾ? ನಾನು ಈ ದೇಶದಲ್ಲೇ ಇರಲಿಲ್ಲ. ಆದರೂ ಅಪಪ್ರಚಾರ ಮಾಡಿದರು. ತಪ್ಪಲ್ವಾ? ಒಂದು ವೇಳೆ ನಾನು ಇಲ್ಲೇ ಇದ್ದಿದ್ದರೆ ಇನ್ನಷ್ಟು ಹೆಸರು ಹಾಳು ಮಾಡುತ್ತಿದ್ದರು. ಮೊದಲೇ ನಮ್ಮ ದೇಶದಲ್ಲಿ ರಾಜಕಾರಣಿಗಳ, ಚಿತ್ರನಟರ ಮಕ್ಕಳ ಬಗ್ಗೆ ಜನರಿಗೆ ಬೇರೆ ಥರದ ಭಾವನೆ ಇರುತ್ತದೆ. ಅಂಥದ್ದರಲ್ಲಿ ಹೀಗೆಲ್ಲಾ ಆದರೆ ಏನು ಮಾಡುವುದು? ನಾವೂ ಮನುಷ್ಯರೇ. ನಮಗೂ ಬೇಜಾರಾಗತ್ತೆ. ನಾನು ನನ್ನ ಲೈಫಲ್ಲೇ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಿದವನಲ್ಲ. ಹಾಗಿದ್ದೂ ತಪ್ಪು ತಪ್ಪಾಗಿ ಹೇಳುತ್ತಾರೆ. ಮಾಧ್ಯಮಗಳು ಕಣ್ಣು ಮುಚ್ಚಿ ಸುದ್ದಿ ಪ್ರಸಾರ ಮಾಡಬಾರದು. ಒಂದ್ಸಲ ನಮಗೆ ಫೋನ್ ಮಾಡಿ ಹೌದಾ ಅಂತ ವಿಚಾರಿಸಬೇಕು. ಆದರೆ ನನ್ನ ತಂದೆ, ತಾಯಿಗೆ ಫೋನ್ ಮಾಡಿ ಕೇಳಬಹುದಿತ್ತು. ಅದು ಬಿಟ್ಟು ಸುಳ್ಳು ಸುಳ್ಳೇ ನನ್ನ ಹೆಸರು ಎಳೆದು ತಂದರು. ಇನ್ನು ನಾನು ಎಲ್ಲಿಗೆ ಹೋದರೂ ಮೊದಲೇ ಹೇಳಿ ಹೋಗುತ್ತೇನೆ.

6) ಈ ಬಗ್ಗೆ ಏನನ್ನಿಸಿತು?

: ನಾನು ಆಗಸ್ಟ್ 31ಕ್ಕೆ ವಿದೇಶಕ್ಕೆ ಹೋದೆ. ಅ.2ರಂದು ವಾಪಸ್ ಊರಿಗೆ ಬಂದೆ. ನಾನು ಅಲ್ಲಿರುವಾಗಲೇ ಫ್ರೆಂಡ್ಸ್ ಫೋನ್ ಮಾಡಿ ವಿಷಯ ಹೇಳಿದರು. ಪುಣ್ಯಕ್ಕೆ ನಮ್ಮ ತಂದೆ ಮೇಲೆ ಜನರಿಗೆ ನಂಬಿಕೆ, ಪ್ರೀತಿ ಇದೆ. ಅದೇ ಪ್ರೀತಿ ನನಗೂ ಕೊಟ್ಟಿದ್ದಾರೆ. ನನ್ನ ಮೇಲೂ ಜನರಿಗೆ ನಂಬಿಕೆ ಇದೆ ಅಂದುಕೊಂಡಿದ್ದೇನೆ. ಆ ನಂಬಿಕೆಯನ್ನು ನಾನು ಯಾವತ್ತೂ ಉಳಿಸಿಕೊಳ್ಳುತ್ತೇನೆ.

7) ವಿಷಯ ಕೇಳಿ ಸಿಟ್ಟು ಬಂದಿಲ್ವೇ?

ಅ: ನಾನು ಒಂಥರಾ ಹ್ಯಾಪಿ ಗೈ. ನಗುತ್ತಾ ಇರುತ್ತೇನೆ. ಅಪ್ಪ ಕೂಡ ಹಾಗೇ ಇದ್ದವರು. ಹಾಗಂತ ಸಿಟ್ಟು ಬರೋದೇ ಇಲ್ಲ ಅಂತಲ್ಲ. ಟೆನ್ಷನ್ ಮಾಡಿಕೊಂಡು ಉಪಯೋಗವಿಲ್ಲ.

ಸಂದರ್ಶನ: ರಾಜೇಶ್ ಶೆಟ್ಟಿ, ಕನ್ನಡಪ್ರಭ

Follow Us:
Download App:
  • android
  • ios