ಬೆಂಗಳೂರು[ಮಾ.17]: ಖ್ಯಾತ ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ವಿಚಾರಕ್ಕಾಗಿ ಹಳೆ ಬಾಯ್‌ಫ್ರೆಂಡ್‌ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಹೊಸ ಬಾಯ್‌ಫ್ರೆಂಡ್‌ ಸಾರಿಗೆ ಇಲಾಖೆ ಅಧಿಕಾರಿ ನಡುವೆ ಶುಕ್ರವಾರ ರಾತ್ರಿ ನಗರದ ಪಂಚತಾರಾ ಹೋಟೆಲ್‌ನಲ್ಲಿ ಮಾರಾಮಾರಿ ನಡೆದಿದೆ.

ಸಾರಿಗೆ ಇಲಾಖೆ ಅಧೀಕ್ಷಕ ಬಿ.ಕೆ.ರವಿಶಂಕರ್‌ ಹಲ್ಲೆಗೊಳಗಾಗಿದ್ದು, ಈ ಗಲಾಟೆ ಸಂಬಂಧ ರಿಯಲ್‌ ಎಸ್ಟೇಟ್‌ ಉದ್ಯಮಿ ಶಿವಪ್ರಕಾಶ್‌ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ಅವರು ಶನಿವಾರ ದೂರು ದಾಖಲಿಸಿದ್ದಾರೆ. ಪಂಚತಾರಾ ಹೋಟೆಲ್‌ಗೆ ರಾತ್ರಿ 11 ಗಂಟೆ ಸುಮಾರಿಗೆ ಊಟಕ್ಕೆ ನಟಿ ಜತೆ ರವಿಶಂಕರ್‌ ತೆರಳಿದ್ದಾಗ ಈ ಘಟನೆ ನಡೆದಿದೆ.

ಗಾಯಾಳು ರವಿಶಂಕರ್‌ ಅವರು ನೀಡಿರುವ ದೂರಿನ ಮೇರೆಗೆ 506 (ಜೀವ ಬೆದರಿಕೆ), 504 (ಹಲ್ಲೆ) ಆರೋಪದಡಿ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

‘ನಾನು ರಾಗಿಣಿ ಸೇರಿದಂತೆ ಕೆಲ ಸ್ನೇಹಿತರ ಜತೆ ಊಟಕ್ಕೆ ತೆರಳಿದ್ದೆ. ಆಗ ಸುಮಾರು 11.45ರ ಸುಮಾರಿಗೆ ನನ್ನ ಬಳಿ ಬಂದ ಶಿವಪ್ರಕಾಶ್‌ ಎಂಬಾತ ಏಕಾಏಕಿ ಜಗಳ ಶುರು ಮಾಡಿದ. ರಾಗಿಣಿ ಜತೆ ನೀನ್‌ ಯಾಕೆ ಬಂದಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ನನಗೆ ಬಿಯರ್‌ ಬಾಟಲ್‌ನಿಂದ ಹೊಡೆದು ಮುಖಕ್ಕೆ ಗುದ್ದಿದ’ ಎಂದು ರವಿಶಂಕರ್‌ ದೂರಿನಲ್ಲಿ ಹೇಳಿದ್ದಾರೆ.

ಈ ಹಂತದಲ್ಲಿ ನನ್ನನ್ನು ಗೆಳೆಯರು ರಕ್ಷಿಸಿದರು. ಆಗ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಆತ ತೆರಳಿದ. ಈ ಘಟನೆಯಿಂದ ನನಗೆ ಜೀವ ಭೀತಿ ಉಂಟಾಗಿದ್ದು, ತಕ್ಷಣವೇ ಶಿವಪ್ರಕಾಶ್‌ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ರವಿಶಂಕರ್‌ ಮನವಿ ಮಾಡಿದ್ದಾರೆ.

ನನಗೆ ಹತ್ತು ವರ್ಷಗಳಿಂದ ರಾಗಿಣಿ ಜತೆ ಸ್ನೇಹವಿದೆ. ಇತ್ತೀಚೆಗೆ ನಮ್ಮ ಗೆಳೆತನದಲ್ಲಿ ರವಿಶಂಕರ್‌ ಮಧ್ಯಪ್ರವೇಶಿದ್ದ. ನಾನು ಆಕೆಗೆ ಕಾರು ಸೇರಿದಂತೆ ಹಲವು ಉಡುಗೊರೆ ಕೊಟ್ಟಿದ್ದೇನೆ. ಹೀಗಿದ್ದರೂ ನನ್ನನ್ನು ರವಿಶಂಕರ್‌ ಸ್ನೇಹದ ಕಾರಣಕ್ಕೆ ನಿರ್ಲಕ್ಷಿಸಿದ್ದರು. ಹೀಗಾಗಿ ಗಲಾಟೆ ಮಾಡಿದೆ ಎಂದು ಶಿವಪ್ರಕಾಶ್‌ ಹೇಳುತ್ತಿದ್ದಾನೆ. ತಕ್ಷಣವೇ ಠಾಣೆಗೆ ಬಂದು ಲಿಖಿತವಾಗಿ ಹೇಳಿಕೆ ನೀಡುವಂತೆ ಆತನಿಗೆ ಸೂಚಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.