ಹೈದರಾಬಾದ್[ಅ. 04]  ಕದ್ದು ಸಿನಿಮಾಕ್ಕೆ ಹೋಗಿ ಸೆಲ್ಫಿ ಕ್ಲಿಕ್ಕಿಸಿ ಹಾಕಿದ್ದ ಪೊಲೀಸರು ಕೆಲಸ ಕಳೆದುಕೊಂಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್ ನಟನೆಯ ‘ಸೈರಾ ನರಸಿಂಹರೆಡ್ಡಿ’ ಚಿತ್ರವನ್ನು ವೀಕ್ಷಿಸಿದ 7 ಪೊಲೀಸರಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಕೊಯಿಲ್ಕುಂಟ್ಲಾದ ಚಿತ್ರಮಂದಿರದಲ್ಲಿ 7 ಮಂದಿ ಸಬ್ ಇನ್ಸ್‌ಪೆಕ್ಟರ್ ತಮ್ಮ ಕರ್ತವ್ಯ ಮರೆತು ಸೈರಾ ಸಿನಿಮಾವನ್ನು ವೀಕ್ಷಿಸಿದ್ದಾರೆ. ಅವರಲ್ಲಿ ಒಬ್ಬರು ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇ ಈಗ ಕುತ್ತು ತಂದಿದೆ.

‘ಸೈರಾ’ದಲ್ಲಿ ಅವುಕು ರಾಜನ ದರ್ಬಾರ್ ಜೋರು, ಕಿಚ್ಚನ ಆ್ಯಕ್ಟಿಂಗ್ ಗೆ ಫಿದಾ ಆಗದವರೇ ಇಲ್ಲ!

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಪೋಟೋ ಕರ್ನೂಲ್ ಪೊಲೀಸ್ ಎಸ್‌ಪಿ ಕೆ. ಫಕೀರಪ್ಪ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಏಳು ಮಂದಿಯ ಬಗ್ಗೆ ಮಾಹಿತಿ ಕಲೆಹಾಕಲು ತಿಳಿಸಿದ್ದಾರೆ. ರಜಾ ಹಾಕದೆ ಪೊಲೀಸ್ ಅಧಿಕಾರಿಗಳು ಸಿನಿಮಾಕ್ಕೆ ತೆರಳಿದ್ದು ಗೊತ್ತಾಗಿದೆ.

ಮಾಹಿತಿಯನ್ನು ಖಚಿತ ಮಾಡಿಕೊಂಡ ಎಸ್ ಪಿ 7 ಪೊಲೀಸರಿಗೆ ಅಮಾನತು ಶಿಕ್ಷೆ ನೀಡಿದ್ದಾರೆ. ಜತೆಗೆ ಕಾರಣವನ್ನು ನೀಡುವಂತೆ ತಿಳಿಸಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ, ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ನಯನತಾರಾ, ಜಗಪತಿ ಬಾಬು ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ. ಚಿರಂಜೀವಿ ಪುತ್ರ ರಾಮ್ ಚರಣ್ ಚಿತ್ರಕ್ಕೆ ಹಣ ಹಾಕಿದ್ದು ಬಜೆಟ್ 200 ಕೋಟಿಗೂ ಮೀರಿದೆ.  ಚಿತ್ರ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣದಲ್ಲಿ ಮುನ್ನುಗ್ಗುತ್ತಿದೆ.