Asianet Suvarna News Asianet Suvarna News

ನಾಗರಹಾವು ನೋಡಲು 6 ಕಾರಣಗಳು

’ನಾಗರಹಾವು’ ಸಿನಿಮಾ ಹೊಸ ರೂಪದಲ್ಲಿ ಮತ್ತೆ ಬಿಡುಗಡೆಯಾಗಿದೆ. ವಿಷ್ಣು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಆ ಕಾಲದಲ್ಲಿ ಬಾರೀ ಸದ್ದು ಮಾಡಿತ್ತು. ಇದೀಗ ಮತ್ತೆ ಸದ್ದು ಮಾಡುತ್ತಿದೆ. ಮತ್ತೇಕೆ ತಡ, ನೀವೂ ಥಿಯೇಟರ್’ಗೆ ಹೋಗಿ. ಸಿನಿಮಾ ನೋಡಿ. ನಾಗರಹಾವನ್ನು ನೀವು ಯಾಕೆ ನೋಡಬೇಕು ಅನ್ನಲು ಇಲ್ಲಿವೆ 6 ಕಾರಣಗಳು. 

6 reasons for watching Nagarahavu Cinema

ಕ್ಲಾಸಿಕ್‌ಗಳಿಗೆ ಕಾಲದ ಹಂಗಿಲ್ಲ. ಅದಕ್ಕೆ ಸಾಕ್ಷಿ ‘ನಾಗರಹಾವು’. 1973 ರಲ್ಲಿ ಬಿಡುಗಡೆಯಾದ ಚಿತ್ರ ಡಿಜಿಟಲ್ ಕೈಚಳಕದಲ್ಲಿ ಮೈತುಂಬಿಕೊಂಡು ಮರು ಬಿಡುಗಡೆಯಾಗಿದೆ.

1. ಕತೆಯ ಪರಿಸರದ ಬಣ್ಣಕ್ಕೆ ಹೊಸ ರೂಪ ಸಿಕ್ಕಿದೆ. ಹಿನ್ನೆಲೆ ಸಂಗೀತ ಕಿವಿಗೆ ಬೀಳುವ ಬಗೆ ಬೇರೆಯಾಗಿದೆ. ಥಿಯೇಟರಲ್ಲಿ ಕೂತು ಈ ಚಿತ್ರದ ಸಿಗ್ನೇಚರ್ ಟ್ಯೂನ್ ಕೇಳುತ್ತಿದ್ದರೆ ಮೈಜುಂ ಅನ್ನುತ್ತದೆ. ದುರ್ಗದ ಕೋಟೆ ನೋಡುತ್ತಿದ್ದರೆ ಮನಸ್ಸು ತುಂಬಿ ಬರುತ್ತದೆ. ಈ ಚಿತ್ರವನ್ನು ಹಬ್ಬವೆನ್ನದೆ ಬೇರೆ ದಾರಿಯಿಲ್ಲ.

2. ಧಗಧಗ ಉರಿಯುವ ಬೆಂಕಿಯನ್ನು ಕಣ್ಣಲ್ಲಿಟ್ಟುಕೊಂಡ ರಾಮಾಚಾರಿ ವಿಷ್ಣುವರ್ಧನ್, ತ್ಯಾಗ ಮತ್ತು ಮಮತೆಯನ್ನು ಚರ್ಮಕ್ಕೆ ಅಂಟಿಸಿಕೊಂಡಿರುವ ಚಾಮಯ್ಯ ಮೇಷ್ಟ್ರು ಕೆಎಸ್ ಅಶ್ವತ್ಥ್, ಕೆನ್ನೆ ಕೆಂಪನ್ನು ಧರಿಸಿ ನಾಚಿಕೊಂಡು ಪ್ರೇಮವುಕ್ಕಿಸುವಂತೆ ಮಾಡುವ ಅಲಮೇಲು ಆರತಿ, ತನ್ನ ಅಹಂಕಾರವನ್ನು ತಾನೇ ದೂರ ಮಾಡಿಕೊಂಡು ಪ್ರೇಮವನ್ನು ಜೀವಿಸುವ ಮಾರ್ಗರೇಟ್ ಶುಭಾ, ಹುಟ್ಟಾ ಕಿಡಿಗೇಡಿಯಂತೆ ಕಾಣಿಸುವ ಜಲೀಲ ಅಂಬರೀಶ್- ಈ ಎಲ್ಲರೂ ಥಿಯೇಟರ್‌ನಿಂದ ಆಚೆ ಬಂದ ಮೇಲೂ ಅವರ ಅಭಿನಯದಿಂದ, ಅವರ ಪಾತ್ರದಿಂದ ಕಾಡದೇ ಹೋದರೆ ಚಿತ್ರ ನೋಡಿದ್ದೇ ಸುಳ್ಳು.

3. ಇತ್ತೀಚೆಗೆ ತೆಲುಗಿನಲ್ಲಿ ಬಂದ ‘ಅರ್ಜುನ್ ರೆಡ್ಡಿ’ ಚಿತ್ರದ ನಾಯಕ ನಿಗಿನಿಗಿ ಕೆಂಡ. ಅದು ಈ ಕಾಲದ ಸೂಪರ್‌ಹಿಟ್ ಚಿತ್ರ. ಆದರೆ ೪೫ ವರ್ಷಗಳ ಹಿಂದೆಯೇ ಯಾವ ಎಲ್ಲೆಯನ್ನೂ ಮೀರದ ಅಂಥದ್ದೊಂದು ಉರಿ ಉರಿ ಬೆಂಕಿ ಚೆಂಡಿನಂತಿರುವ ಪಾತ್ರವನ್ನು ಸೃಷ್ಟಿಸಿದ್ದರು ಪುಟ್ಟಣ್ಣ ಕಣಗಾಲ್. ಆ ಕಾಲದಲ್ಲಿ ತರಗತಿಯಲ್ಲಿ ನಾಯಕನ ಪ್ಯಾಂಟು ಬಿಚ್ಚಿಸಿದ್ದರು, ಇಡೀ ಚಿತ್ರದಲ್ಲಿ ಅವನು ಉರಿಯುವಂತೆ ನೋಡಿಕೊಂಡಿದ್ದರು. ಅಂಥಾ ಮಹಾನ್ ನಿರ್ದೇಶಕನ ಕಲ್ಪನೆಯ ರಾಮಾಚಾರಿಯನ್ನು ನೋಡದೇ ಹೋದರೆ ಕನ್ನಡ ಚಿತ್ರಗಳ ಬಗ್ಗೆ ಇನ್ನೊಂದು ಮಾತು ಆಡಬಾರದು.

4. ಒಂದೊಂದು ಪಾತ್ರವೂ ಇಲ್ಲಿ ಒಂದೊಂದು ಕಾದಂಬರಿ. ಪ್ರೇಮ, ವಿರಹ, ಅವಮಾನ, ಕೋಪ, ಜಗಳ, ಮಾಧುರ್ಯ, ಮಿತ್ರದ್ರೋಹ, ತ್ಯಾಗ, ಮಮತೆ, ವಿಷಾದ ಎಲ್ಲವನ್ನೂ ತುಂಬಿಕೊಂಡಿರುವ ಈ ಚಿತ್ರದ ಒಂದೊಂದು ದೃಶ್ಯವನ್ನೂ ಪುಟ್ಟಣ್ಣ ಎಷ್ಟೊಂದು ಜತನವಾಗಿ ಹೆಣೆದಿದ್ದಾರೆ ಅನ್ನುವುದು ಸಿನಿಮಾ ಮಾಡುವವರಿಗೆ ಪಾಠ. ಪ್ರೇಕ್ಷಕನಿಗೆ ಹಬ್ಬ. ಕೆಲವೊಂದು ಚಿತ್ರಗಳಲ್ಲಿ ಯಾವ ಸೀನನ್ನು ಚಿತ್ರದಿಂದ ತೆಗೆಯಬಹುದು ಎಂದು ಲೆಕ್ಕ ಹಾಕಬಹುದು. ಆದರೆ ನಾಗರಹಾವು ಚಿತ್ರದಲ್ಲಿ ತೆಗೆಯಬಹುದು ಅನ್ನುವ ಒಂದೇ ಒಂದು ದೃಶ್ಯವಿಲ್ಲ.

5. ವಾರಕ್ಕೆ ಆರು, ಎಂಟು ಸಿನಿಮಾ ಬಿಡುಗಡೆಯಾಗುತ್ತದೆ. ಮರುವಾರ ರಿಲೀಸಾದ ಅಷ್ಟೂ ಸಿನಿಮಾಗಳಲ್ಲಿ ಒಂದು ಸಿನಿಮಾ ಉಳಿದರೆ ಆ ವಾರದ ಪುಣ್ಯ. ಭಾರಿ ಟೆಕ್ನಾಲಜಿಯ ಸಹಾಯವಿದ್ದೂ ಎಡವುವವರು ಬಹಳ ಮಂದಿ. ಅಂಥದ್ದರಲ್ಲಿ ನಿರ್ದೇಶಕ ಪುಟ್ಟಣ್ಣ  ಕಣಗಾಲ್, ನಿರ್ಮಾಪಕ ವೀರಾಸ್ವಾಮಿ, ಸಂಗೀತ ನಿರ್ದೇಶಕ ವಿಜಯ ಭಾಸ್ಕರ್, ಛಾಯಾಗ್ರಾಹಕ ಚಿಟ್ಟಿಬಾಬು ಮತ್ತು ಪ್ರತಿಯೊಬ್ಬ ಕಲಾವಿದ ಕೂಡ ತಮ್ಮನ್ನು ತಾವು ಅರ್ಪಿಸಿಕೊಂಡು ಮಾಡಿದ ಈ ಚಿತ್ರ ಯಾವತ್ತೂ ಮರೆಯಲಾಗದೇ ಇರುವ ಅನುಭವ.

6. ಒಂದು ಚಿತ್ರದ ಕೇಂದ್ರವಾಗಿ ಒಂದು ಊರನ್ನು ತೋರಿಸಿರುವುದು, ಅದರಲ್ಲೂ ಪ್ರಮುಖವಾಗಿ ದುರ್ಗದ ಕೋಟೆಯನ್ನಿಡೀ ತೋರಿಸಿದ್ದು ಈ ಚಿತ್ರದ ಹೆಚ್ಚುಗಾರಿಕೆ. ನೋಡುತ್ತಾ ನೋಡುತ್ತಾ ನಾವೇ ಕೋಟೆಯನ್ನು ಹತ್ತುತ್ತಿದ್ದೇವೆ, ಅಲ್ಲಿ ಓಡಾಡುತ್ತಿದ್ದೇವೆ ಅನ್ನುವ ಭಾವವನ್ನು ಮತ್ತೆ ದಯಪಾಲಿಸಿದ ವಿ. ರವಿಚಂದ್ರನ್ ಮತ್ತು ವಿ. ಬಾಲಾಜಿ ಇಬ್ಬರಿಗೂ ಅಭಿನಂದನೆ ಮತ್ತು ಧನ್ಯವಾದ.

Follow Us:
Download App:
  • android
  • ios