ಇದು ನಿರ್ದೇಶಕ ರಾಜಮೌಳಿ ಅವರ ಪ್ರಚಾರದ ಗಿಮಿಕ್ಕೋ ಅಥವಾ ಪಾರ್ಟ್-೨ ಕತೆ ಕಡೆಗೆ ಪ್ರೇಕ್ಷಕರ ಗಮನ ಸೆಳೆಯುವ ತಂತ್ರವೋ ಗೊತ್ತಿಲ್ಲ. ಕಳೆದ ಹತ್ತು ದಿನಗಳಿಂದ ಆಗುತ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದ ಕುರಿತು ಒಂದಿಷ್ಟು ಸುದ್ದಿಗಳು ಸ್ಫೋಟಗೊಳ್ಳುತ್ತಿವೆ. ನಿರ್ದೇಶಕ ರಾಜಮೌಳಿ ಅವರೇ ಹೇಳುವಂತೆ, ‘ಬಾಹುಬಲಿ 2ನೇ ಭಾಗವು ಒಂದೇ ಕ್ಲೈಮ್ಯಾಕ್ಸ್ ಅನ್ನು ಒಳಗೊಂಡಿಲ್ಲ. ಒಟ್ಟು ನಾಲ್ಕು ಕ್ಲೈಮ್ಯಾಕ್ಸ್‌ಗಳನ್ನು ಸಿನಿಮಾ ಒಳಗೊಂಡಿದೆ’!

ಇಲ್ಲಿಯವರೆಗೂ ಒಂದು ಸಿನಿಮಾದಲ್ಲಿ ಒಂದು ಅಥವಾ ಎರಡು ಕ್ಲೈಮ್ಯಾಕ್ಸ್‌ಗಳನ್ನು ನೋಡಿದ್ದೇವೆ. ಆದರೆ, ಒಂದೇ ಸಿನಿಮಾದಲ್ಲಿ 4 ಮುಕ್ತಾಯಗಳು ಅಂದರೆ ಹೇಗೆ? ಈ ಅಚ್ಚರಿ ಎಲ್ಲರನ್ನೂ ಕಾಡಿದೆ. ಅಲ್ಲದೆ ಶೂಟಿಂಗ್ ಮುಗಿದ ಮೇಲೆಯೂ ತಮ್ಮ ಸಿನಿಮಾ ಬಗ್ಗೆ ಒಂದೇ ಗುಟ್ಟು ಬಿಟ್ಟುಕೊಡದ ರಾಜಮೌಳಿ ಈಗ ನಾಲ್ಕು ಕ್ಲೈಮ್ಯಾಕ್ಸ್‌ನ ರಹಸ್ಯದ ಸುಳಿವು ನೀಡಿರುವುದೇಕೆ? ಈ ಅನುಮಾನವೂ ಕಾಡುತ್ತದೆ. ಈಗಾಗಲೇ ಚಿತ್ರದ ಮೊದಲ ಭಾಗದಲ್ಲಿ ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿತ್ತು. ಅಚ್ಚರಿಯೆಂದರೆ, ಈ ಪ್ರಶ್ನೆಗೆ ಉತ್ತರ ತಮನ್ನಾಳಿಗೂ ಗೊತ್ತಿಲ್ಲ! ಅನುಷ್ಕಾ ಶೆಟ್ಟಿಗೂ ತಿಳಿದಿಲ್ಲ! ರಾಣಾ ದಗ್ಗುಭಾಟಿಗಂತೂ ಗೊತ್ತೇ ಇಲ್ಲ! ಈ ಪ್ರಶ್ನೆಗೆ ಉತ್ತರ ಗೊತ್ತಿರುವುದು ಮೂರೇ ಜನಕ್ಕಂತೆ! ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್, ಬಾಹುಬಲಿ ಪಾತ್ರಧಾರಿ ಪ್ರಭಾಸ್ ಹಾಗೂ ನಿರ್ದೇಶಕ ರಾಜಮೌಳಿಯ ಹೊರತಾಗಿ ಬೇರಾರಿಗೂ ಇದರ ಬಗ್ಗೆ ಮಾಹಿತಿಯಿಲ್ಲ. ಸ್ವಂತ ಮನೆಯ ಕಲಾವಿದರಿಗೇ ಗುಟ್ಟು ಬಿಟ್ಟುಕೊಡದ ರಾಜಮೌಳಿಯ ‘4 ಕ್ಲೈಮ್ಯಾಕ್ಸ್’ನ ರಹಸ್ಯ ಇನ್ನೇನೋ ಇರಬಹುದಾ?

ನಿರ್ದೇಶಕರ ಈ ನಡೆ ನೋಡುತ್ತಿರುವ ಟಾಲಿವುಡ್ ಮಂದಿ ‘ಇದು ಜಕ್ಕಣ್ಣ ಅವರ ಮತ್ತೊಂದು ಪ್ರಚಾರದ ತಂತ್ರ’ ಎಂದು ಆಡಿಕೊಳ್ಳುತ್ತಿದೆ. ಮೊದಲ ಭಾಗದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎನ್ನುವ ಒಂದೇ ಒಂದು ಪ್ರಶ್ನೆಯಿಂದ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರುವ ಸಾಧ್ಯತೆಗಳು ಕಡಿಮೆ. ಕಟ್ಟಪ್ಪ ಜತೆಗೆ ಬೇರೆ ಏನಾದರೂ ಬೇಕು ಎಂದುಕೊಂಡ ನಿರ್ದೇಶಕರಿಗೆ ಈ ನಾಲ್ಕು ಕ್ಲೈಮ್ಯಾಕ್ಸ್‌ನ ಗುಟ್ಟು ಹೊಳೆದಿದೆ. ಹೀಗಾಗಿ ಇನ್ನೇನು ಚಿತ್ರೀಕರಣ ಮುಗಿಯುವ ಹೊತ್ತಿಗೆ ಸಿನಿಮಾ ಸಾಧ್ಯವಾದಷ್ಟು ಪ್ರಚಾರದ ಅಲೆಯಲ್ಲಿ ತೇಲಬೇಕು ಎನ್ನುವ ಯೋಚನೆಯಲ್ಲಿ ಕ್ಲೈಮ್ಯಾಕ್ಸ್ ಕತೆಗಳ ಗುಟ್ಟು ಹೊರಗಿಟ್ಟಿದ್ದಾರೆ ಎಂಬುದು ಹಲವರ ಅನುಮಾನ. ಆದರೆ, ಇಡೀ ಭಾರತೀಯ ಚಿತ್ರರಂಗವನ್ನೇ ತನ್ನತ್ತ ಸೆಳೆದಿರುವ ರಾಜಮೌಳಿಯ ಬಾಹುಬಲಿ ಇಂಥ ಹುಸಿ ಪ್ರಚಾರದ ತಂತ್ರದ ಮೊರೆ ಹೋಗುವುದು ಸಾಧ್ಯವೇ ಎನ್ನುವ ಕುತೂಹಲ ಕೂಡ ಮತ್ತೊಂದೆಡೆ ಕೇಳಿಬರುತ್ತಿದೆ. ಅಲ್ಲಿಗೆ ಕಟ್ಟಪ್ಪ ಜತೆಗೆ ನಾಲ್ಕು ಕ್ಲೈಮ್ಯಾಕ್ಸ್ ಹುಳ ಪ್ರೇಕ್ಷಕರ ತಲೆ ಸೇರಿಕೊಂಡಿದೆ. ಸಿನಿಮಾ ಬಿಡುಗಡೆಯಾದ ಮೇಲೆಯೇ ಅವು ತಲೆಯಿಂದ ಕೆಳಗೆ ಇಳಿಯುವುದು!

ಈ ನಡುವೆ ಮುಂದುವರಿದ ಬಾಹುಬಲಿ ಕತೆಗೆ ರಾಜಮೌಳಿ ಸಾಕಷ್ಟು ಸರ್ಜರಿ ಮಾಡಿದ್ದಾರಂತೆ. ಒಂದು ಮೂಲದ ಪ್ರಕಾರ ಚಿತ್ರದಲ್ಲಿ ತೀರಾ ಕುತೂಹಲ ಹುಟ್ಟಿಸಿರುವ ದೇವಸೇನಾ ಪಾತ್ರಧಾರಿಯ ಅನುಷ್ಕಾ ಅವರ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆಯಂತೆ. ಅನುಷ್ಕಾ ಪಾತ್ರವನ್ನು ಕಡಿಮೆ ಮಾಡಿ ಅವಂತಿಕಾ ಪಾತ್ರಧಾರಿಯಾದ ತಮನ್ನಾಳನ್ನು ಹೆಚ್ಚು ಫೋಕಸ್ ಮಾಡಿ ತೋರಿಸಲಾಗಿದೆಯಂತೆ. ಇದು ಅನುಷ್ಕಾ ಅಭಿಮಾನಿಗಳಲ್ಲಿ ಕೊಂಚ ಬೇಸರಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಅನುಷ್ಕಾ ಕೆಲ ದಿನಗಳ ಹಿಂದೆ ಚಿತ್ರೀಕರಣಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸುದ್ದಿಗಳು ಹುಟ್ಟಿಕೊಂಡವು. ಈ ಎಲ್ಲ ಒತ್ತಡಗಳಿಂದ ಪಾರಾಗಲು ಜತೆಗೆ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಲು ರಾಜಮೌಳಿ ಬಿಟ್ಟಿರುವ ಹೊಸ ಬಾಂಬ್ ಈ ‘4 ಕ್ಲೈಮ್ಯಾಕ್ಸ್’ ಎಂದು ಚಿತ್ರತಂಡವೇ ಆಡಿಕೊಳ್ಳುತ್ತಿದೆ. ಹಾಗೊಂದು ವೇಳೆ ಈ ಕ್ಲೈಮ್ಯಾಕ್ಸ್ ವಿಚಾರದಲ್ಲಿ ತೀರಾ ಗೊಂದಲ ಉಂಟಾದರೆ ಒಂದು ಕ್ಲೈಮ್ಯಾಕ್ಸ್ ಅನ್ನು ಚಿತ್ರದಲ್ಲೇ ತೋರಿಸಿ ಉಳಿದ ಮೂರು ಕ್ಲೈಮ್ಯಾಕ್ಸ್‌ಗಳನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡುವುದಕ್ಕೂ ಯೋಜನೆ ರೂಪಿಸಿದ್ದಾರಂತೆ. ಒಟ್ಟಿನಲ್ಲಿ ರಾಜಮೌಳಿಯ ಮಝಾಕಾ!