‘ಶ್ರೀ ಸಾಯಿ’ ಚಿತ್ರದ ನಂತರ ಉದ್ಯಮಿ ಸೆಂಲ್ ನಿರ್ಮಿಸುತ್ತಿರುವ ‘ಓಂಕಾರ ಅಯ್ಯಪ್ಪನೆ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಓಂ ಸಾಯಿ ಪ್ರಕಾಶ್.
ಅಪ್ಪ- ಮಗ, ತಾಯಿ- ಮಗಳು ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಿದ್ದು ಹೇಗೆ ಅಪರೂಪವೋ, ಹಾಗೆಯೇ ಇಲ್ಲೊಂದು ಅಚ್ಚರಿಯಿದೆ. ಮೂರು ತಲೆಮಾರು ಒಂದೇ ಚಿತ್ರದ ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ! ಇದು ‘ಓಂಕಾರ ಅಯ್ಯಪ್ಪನೆ’ ಚಿತ್ರದ ಸಮಾಚಾರ. ಹಿರಿಯ ನಟ ಶ್ರೀನಿವಾಸ ಮೂರ್ತಿ, ಅವರ ಪುತ್ರ ನವೀನಕೃಷ್ಣ, ಮೊಮ್ಮಗ ಹರ್ಷಿತ್ ಮೂವರೂ ಒಂದೇ ದೃಶ್ಯದಲ್ಲಿ ಸಮಾಗಮಗೊಂಡಿದ್ದಾರೆ.
‘ಶ್ರೀ ಸಾಯಿ’ ಚಿತ್ರದ ನಂತರ ಉದ್ಯಮಿ ಸೆಂಲ್ ನಿರ್ಮಿಸುತ್ತಿರುವ ‘ಓಂಕಾರ ಅಯ್ಯಪ್ಪನೆ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಓಂ ಸಾಯಿ ಪ್ರಕಾಶ್. ಈ ಚಿತ್ರದಲ್ಲಿನ ಕೋರ್ಟ್ ದೃಶ್ಯದಲ್ಲಿ ಶ್ರೀನಿವಾಸಮೂರ್ತಿ, ಅವರ ಪುತ್ರ ನವೀನ್‌ಕೃಷ್ಣ ಹಾಗೂ ಮೊಮ್ಮಗ ಹರ್ಷಿತ್ ಒಟ್ಟಿಗೆ ನಟಿಸಿದ್ದಾರೆ. ‘ಕನ್ನಡ ಚಿತ್ರರಂಗದ ಮಟ್ಟಿಗೆ ಹೀಗೆ ಒಂದೇ ದೃಶ್ಯದಲ್ಲಿ ಅಪ್ಪ, ಮಗ ಹಾಗೂ ಮೊಮ್ಮಗ ನಟಿಸಿರುವುದು ಅಪರೂಪ’ ಎನ್ನುತ್ತಾರೆ ನಿರ್ದೇಶಕ ಓಂ ಸಾಯಿ ಪ್ರಕಾಶ್.
ಚಿತ್ರದಲ್ಲಿ ನವೀನ್ ಕೃಷ್ಣ ಅವರದ್ದು ಕಳ್ಳನ ಪಾತ್ರ. ಆಭರಣಗಳನ್ನು ಕದ್ದು ಮಾರಿ, ಬಂದ ಹಣದಲ್ಲಿ ಸುಖ ಅನುಭವಿಸುವ ಕಾಯಕ. ಆಕಸ್ಮಿಕವಾಗಿ ಅವರು ಅಯ್ಯಪ್ಪನ ಕೃಪೆಗೆ ಒಳಗಾಗಿ ಕಳ್ಳತನ ಬಿಟ್ಟು ಸಭ್ಯರಾಗುತ್ತಾರೆ. ಆದರೆ ಅದು ಅಲ್ಲಿನ ಕೆಲವು ಮಾರ್ವಾಡಿಗಳಿಗೆ ಇಷ್ಟ ಆಗುವುದಿಲ್ಲ. ದೇಗುಲದಲ್ಲಿನ ವಿಗ್ರಹ ಕಳ್ಳತನ ಮಾಡುವಂತೆ ಆತನಿಗೆ ಆಮಿಷ ತೋರಿಸುತ್ತಾರೆ. ಅದಕ್ಕವರು ಒಪ್ಪುವುದಿಲ್ಲ. ಆತ ಒಪ್ಪಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ತಾವೇ ವಿಗ್ರಹ ಕದ್ದು ಆತನ ಮೇಲೆ ಕಳ್ಳತನದ ಆರೋಪ ಹೊರಿಸುತ್ತಾರೆ. ಈ ಪ್ರಕರಣ ಕೋರ್ಟ್ ಮೇಟ್ಟಿಲೇರುತ್ತದೆ. ಅಲ್ಲಿ ಶ್ರೀನಿವಾಸ ಮೂರ್ತಿ ಜಡ್ಜ್. ಪ್ರಕರಣದ ವಿಚಾರಣೆ ನಡೆಯುತ್ತದೆ. ಆತನೇ ಕಳ್ಳ ಎನ್ನುವುದಾಗಿ ಸಾಬೀತು ಮಾಡುವ ಸಂಚು ನಡೆಯುತ್ತದೆ. ವಿಚಾರಣೆ ಹಂತದಲ್ಲಿ ನವೀನ್ ಕೃಷ್ಣ ಮೇಲಿನ ಆರೋಪ ಸುಳ್ಳು ಎನ್ನುವುದನ್ನು ಸಾಬೀತು ಮಾಡಲು ಬಾಲಕ ಹರ್ಷಿತ್ ಅಯ್ಯಪ್ಪನ ರೂಪದಲ್ಲಿ ಬರುತ್ತಾನೆ!
