ತಿರುವನಂತಪುರಂ :  ನಟಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಟ  ದಿಲೀಪ್ ಮತ್ತೆ ಮರಳಿ  ಮಲಯಾಳಂ ಚಲಚಿತ್ರ ಕಲಾವಿದ ಸಂಘ ಅಮ್ಮಾಗೆ ಮರಳಿದ ಹಿನ್ನೆಲೆಯಲ್ಲಿ ಇದೀಗ ಮೂವರು ನಟಿಯರು ಸಂಘವನ್ನು ತೊರೆದಿದ್ದಾರೆ. 

ನಟ ದಿಲೀಪ್ ಹಾಗೂ ಅವರ 9 ಮಂದಿ ಸ್ನೇಹಿತರು ಸೇರಿ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಬಂಧನಕ್ಕೊಳಪಟ್ಟಿದ್ದರು.  ಇದೀಗ ಬಿಡುಗಡೆಯಾದ ಅವರು ಮತ್ತೆ ಅಮ್ಮಾ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. 

ಈ ನಿಟ್ಟಿನಲ್ಲಿ ನಟಿಯರಾದ ರಿಮಾ ಕಾಳಿಂಗಲ್, ರೆಮ್ಯಾ ನಂಬೀಸನ್, ಗೀತು ಮೋಹನ್ ದಾಸ್ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ನಟಿಯೂ ಸಂಘದ ತಮ್ಮ ಸ್ಥಾನ ತೊರೆದಿದ್ದಾರೆ. 

ಆದರೆ ಪ್ರಕರಣದಲ್ಲಿ ನಟಿಗೆ ನ್ಯಾಯ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿಲೀಪ್ ಪತ್ನಿ ಮಂಜು ವಾರಿಯರ್ ಇನ್ನೂ ಕೂಡ ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದಾರೆ.  ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಟಿ ಅಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದೂ ಹೇಳಿದ್ದಾರೆ. 

ಇಂತಹ ಕೃತ್ಯ ಎಸಗಿದ್ದ ದಿಲೀಪ್ ರನ್ನು ವಾಪಸ್ ಕರೆಸಿಕೊಂಡ ಕಲಾವಿದರ ಸಂಘ ಅಮ್ಮಾ  ಯಾರ ಪರವಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ರೆಮ್ಯಾ ನಂಬೀಸನ್ ಹೇಳಿದ್ದಾರೆ.