ಗೇಟ್‌ಕೀಪರ್- ಹಿಂದಿ
ಅತನು ಮುಖರ್ಜಿ ನಿರ್ದೇಶಿಸಿದ ಶಾರ್ಟ್‌ಫಿಲ್ಮ್ ಇದು. ಇದೊಬ್ಬ ರೈಲ್ವೇ ಗೇಟ್‌ಕೀಪರ್‌ನ ಕತೆ. ನಿರ್ಜನ ಪ್ರದೇಶವೊಂದರಲ್ಲಿ ಆತ ಗೇಟ್‌ಕೀಪರ್. ರೈಲುಗಳು ಆಚೀಚೆ ಹೋಗುವುದನ್ನು ನೋಡುವುದು ಬಿಟ್ಟರೆ ಬೇರೆ ಏನೂ ಇಲ್ಲ. ಅಂಥಾ ಏಕಾಂತದಲ್ಲಿರುವವನ ಕಾಡುವ ಕತೆ ಹೇಳಿದ್ದಾರೆ ನಿರ್ದೇಶಕ. ಇಬ್ಬರು ನಟರಿದ್ದಾರೆ ಇಲ್ಲಿ. ಆದರೆ ಅವರಿಗೆ ಮಾತಿಲ್ಲ. ಮೌನದಲ್ಲೇ ಬಹಳಷ್ಟನ್ನು ಹೇಳುವ ಈ ಕತೆಗೆ ಬಹಳ ಪ್ರಶಸ್ತಿಗಳು ಸಿಕ್ಕಿವೆ.

ಆಫ್ಟರ್‌ಗ್ಲೋ- ಬಹುಭಾಷೆ
ಆಗತಾನೇ ಅನಾರೋಗ್ಯ ಪೀಡಿತ ಗಂಡನನ್ನು ಕಳೆದುಕೊಂಡ ತರುಣಿಯ ಕತೆ ಇದು. ನಿರ್ದೇಶಿಸಿದ್ದು ಕೌಶಲ್ ಓಝಾ. ಜನರ ಮಾತುಗಳು, ಸಲಹೆಗಳು- ಇವುಗಳ ಮಧ್ಯೆ ಕಾಡುವ ಹಳೆಯ ನೆನಪುಗಳ ಜತೆಗೆ ಆಕೆ ಹೇಗೆ
ಎದುರಾಗುತ್ತಾಳೆ ಅನ್ನುವ ಸೂಕ್ಷ್ಮ ಕತೆ ಇಲ್ಲಿದೆ. ಮೆಲೋಡ್ರಾಮಾ. ತಣ್ಣನೆಯ ದನಿಯಲ್ಲಿ ಮನಸ್ಸು ಕರಗುವಂತಹ ಕತೆ ಹೇಳಿದ್ದು ನಿರ್ದೇಶಕರ ಹೆಚ್ಚುಗಾರಿಕೆ.

ಪರೋಕ್ಷ- ತುಳು
ಗಣೇಶ್ ಶೆಟ್ಟಿ ನಿರ್ದೇಶನದ ಈ ಚಿತ್ರ ಕಳೆದ ವರ್ಷದ ಬಹು ಚರ್ಚಿತ ಶಾರ್ಟ್‌ಫಿಲ್ಮ್. ಸತ್ಯ ಘಟನೆಯನ್ನು ಆಧರಿಸಿದ ಕತೆಯುಳ್ಳ ಈ ಶಾರ್ಟ್‌ಫಿಲ್ಮ್ ತನ್ನ ತಾಂತ್ರಿಕತೆಯಿಂದಾಗಿಯೇ ಸಿನಿಮಾಸಕ್ತರ ಗಮನ ಸೆಳೆದಿತ್ತು. ದಕ್ಷಿಣ ಕನ್ನಡದ ಪರಿಸರ, ಅಲ್ಲಿನ ಆಚರಣೆ ಇವೆಲ್ಲವನ್ನೂ ಬಹು ಸುಂದರವಾಗಿ ಕಟ್ಟಿಕೊಟ್ಟಿರುವ ಕಿರುಚಿತ್ರವಿದು. ಥ್ರಿಲ್ಲರ್ ಮಾದರಿಯ ಈ ಚಿತ್ರ ನಿಮ್ಮನ್ನು ಕಡೆಯವರೆಗೂ ಹಿಡಿದು ಕೂರಿಸುತ್ತದೆ.

ಪಲ್ಲೊಟ್ಟಿ- ಮಲಯಾಳಂ
ಬಾಲ್ಯ ಚೆಂದ. ಆ ದಿನಗಳ ತುಂಟಾಟವನ್ನು ನೆನಪಿಸಿಕೊಂಡರೆ ತುಟಿ ಮೇಲೆ ತನ್ನಿಂತಾನೇ ನಗು ಮೂಡುತ್ತದೆ. ಮುಗ್ಧ ಗೆಳೆತನ, ನಿಷ್ಕಲ್ಮಷ ಪ್ರೇಮ, ತುಂಟಾಟ, ತರ್ಲೆ ಇವೆಲ್ಲವನ್ನೂ ಇಟ್ಟುಕೊಂಡು ಒಂದು ನಾಸ್ಟಾಲ್ಜಿಕ್ ಅನುಭವ ಕಟ್ಟಿಕೊಡುವ ಕಿರುಚಿತ್ರ ನಿರ್ದೇಶಿಸಿದ್ದು ಜಿತಿನ್ ರಾಜ್. ಈ ಕಿರುಚಿತ್ರವನ್ನು ನೋಡುತ್ತಿದ್ದಂತೆ ನಿಮ್ಮ ಬಾಲ್ಯ ನೆನಪಾಗುತ್ತದೆ, ಬಾಲ್ಯದ ಗೆಳೆಯರು ನೆನಪಾಗುತ್ತಾರೆ. ಅದು ನಿಶ್ಚಿತ.

ದೇಬಿ- ಬೆಂಗಾಳಿ
ಈ ಕಿರುಚಿತ್ರದ ನಿರ್ದೇಶಕ ಅನಿರುದ್ ರಾಯ್ ಚೌಧರಿ. ಬೆಳೆದು ನಿಂತ ಹೆಣ್ಣು ಮಗಳೊಬ್ಬಳು ಮನೆ ಬಿಟ್ಟು ಹೋಗಿ ತುಂಬಾ ಕಾಲವಾಗಿರುತ್ತದೆ. ಎಲ್ಲೋ ದೂರದಲ್ಲಿ ಅವಳ ಪಾಡಿಗೆ ಅವಳು ಬದುಕು ನಡೆಸುತ್ತಿರುವಾಗ ಮತ್ತೆ ತನ್ನ ಮನೆಗೆ ವಾಪಸ್ ಹೋಗುವ ಸಂದರ್ಭ ಬರುತ್ತದೆ. ಅದೇ ವೇಳೆಗೆ ಮನೆಯಲ್ಲಿ ದುರ್ಗ ಪೂಜೆಯ ಸಂಭ್ರಮ. ನಾಯಕಿ ಮತ್ತದೇ ಹಳೆಯ ನೆನಪುಗಳಿಗೆ ಜಾರುತ್ತಾಳೆ. ಬಣ್ಣಗಳ ನಡುವಲ್ಲಿ ನಡೆಯುವ ದುರ್ಗಾ ಪೂಜೆಯ ಹಿನ್ನೆಲೆಯಲ್ಲಿ ಸಾಗುವ ಕಿರುಚಿತ್ರ.

ದಿ ಗಾಡ್ ಮಸ್ಟ್ ಬಿ ಕ್ರೇಜಿ- ತೆಲುಗು
ನಿರ್ದೇಶಿಸಿದ್ದು ಜಯಶಂಕರ್. ಪೂರ್ಣವಾಗಿ ಮೊಬೈಲ್ ಫೋನ್‌ನಲ್ಲಿಯೇ ಚಿತ್ರೀಕರಣಗೊಂಡಿರುವ ಕಿರು ಚಿತ್ರವಿದು. ಇಬ್ಬರು ಪಾತ್ರಧಾರಿಗಳನ್ನೇ ಮುಖ್ಯವಾಗಿಟ್ಟುಕೊಂಡು ಸಂಭಾಷಣೆಯನ್ನೇ ಜೀವಾಳವಾಗಿ ಹೊಂದಿರುವ ಚಿತ್ರ. ಉದ್ಯೋಗಕ್ಕೆ ಬಂದ ವ್ಯಕ್ತಿಯನ್ನು ಉದ್ಯೋಗದಾತ ಸಂದರ್ಶನ ಮಾಡುತ್ತಾನೆ. ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳುತ್ತಾನೆ. ಇದಕ್ಕೆ ಕೆಲಸ ಹರಸಿ ಬಂದವನು ಉತ್ತರ ನೀಡುತ್ತಾನೆ. ಗಂಭೀರ ಚಿಂತನೆಗಳನ್ನು ತಿಳಿ ಹಾಸ್ಯದ ಮೂಲಕ ಹೇಳಲಾಗಿದೆ ಇಲ್ಲಿ.

ಸಕ್‌ನೋಯಾ- ಅಸ್ಸಾಮಿ
ಖಾನ್‌ಜಾನ್ ಕಿಶೋರ್ ನಾಥ್ ನಿರ್ದೇಶನದ ಚಿತ್ರವಿದು. ಬಡ ಮೀನುಗಾರ ತಂದೆಗೆ ಒಂದೇ ಆಸೆ, ಅದು ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ವ್ಯಕ್ತಿ ಮಾಡಬೇಕು ಎನ್ನುವುದು. ಅದಕ್ಕೆ ಆಧಾರವಾಗಿ ಇದ್ದದ್ದು ಪುಟ್ಟ ದೋಣಿಯಲ್ಲಿ ಮೀನು
ಹಿಡಿಯುವ ಕೆಲಸವೊಂದೇ. ಎಲ್ಲವೂ ಅಂದುಕೊಂಡಂತೆಯೇ ಸಾಗುತ್ತಿರುವಾಗ ಇದ್ದಕ್ಕಿದ್ದ ಹಾಗೆ ತಂದೆ ತೀರಿಕೊಳ್ಳುತ್ತಾನೆ. ಪುಟ್ಟ ಮಗನಿಗೆ ಏನು ಮಾಡಬೇಕು ಎನ್ನುವುದೇ ತಿಳಿಯದಾಗುತ್ತದೆ. ಬದುಕು ಮತ್ತೊಂದು ಕಡೆಗೆ ತಿರುವು ಪಡೆದುಕೊಳ್ಳುತ್ತದೆ. 

ಆಯ್ ಶಪತ್- ಮರಾಠಿ
ಚಿತ್ರದ ನಿರ್ದೇಶಕ ಗೌತಮ್ ವಾಜ್. ಚಿಕ್ಕ ಮಕ್ಕಳನ್ನು ಸುತ್ತ ಕೂರಿಸಿಕೊಂಡು ಪುಟ್ಟ ಪುಟ್ಟ ಕತೆಗಳನ್ನು ತಾಯಂದಿರು, ಅಜ್ಜಿಯಂದಿರು ಹೇಳುವುದು ನಮ್ಮಲ್ಲಿ ಸಾಮಾನ್ಯ. ಅಲ್ಲಿ ದೆವ್ವದ ಕತೆಗಳು, ದೊಡ್ಡ ದೊಡ್ಡ ರಾಕ್ಷಸರ ಕತೆಗಳು ಬರುತ್ತವೆ. ಅದನ್ನು ಮಕ್ಕಳಾದವರು ನಿಜವೇ ಎಂದು ನಂಬುತ್ತಾರೆ. ಸಾಧ್ಯವಾದಷ್ಟು ರೋಚಕವಾಗಿ ಅದನ್ನು ತಮ್ಮ ಸ್ನೇಹಿತರಿಗೂ ಹೇಳುತ್ತಾರೆ. ಇದೇ ಎಳೆಯನ್ನು ಹದಿಮೂರು ನಿಮಿಷಗಳಲ್ಲಿ ತಮಾಷೆಯಾಗಿ, ಮಕ್ಕಳಿಂದ ಒಳ್ಳೆಯ ನಟನೆ ಮಾಡಿಸುವ ಮೂಲಕ ಕಟ್ಟಿಕೊಡಲಾಗಿದೆ. 

ದಿ ಅಫೇರ್ಸ್- ತಮಿಳು
ಸೂರ್ಯ ಎಂ ನಾರಾಯಣನ್ ನಿರ್ದೇಶನದ ಕಿರುಚಿತ್ರ. ಈ ಕತೆಯಲ್ಲಿ ಸುಮಾರು 52ವರ್ಷದ ಮದುವೆಯಾದ ವ್ಯಕ್ತಿಯೊಬ್ಬ ಬೇರೊಬ್ಬ ತನ್ನ ಮಗಳ ವಯಸ್ಸಿನ ಸ್ತ್ರೀ ಜೊತೆಗೆ ಸಂಬಂಧ ಹೊಂದಿರುತ್ತಾನೆ. ಒಂದು ದಿನ ವ್ಯಕ್ತಿಯ ಮಕ್ಕಳು ಆತನನ್ನು ಹಿಂಬಾಲಿಸಿ ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬರುತ್ತದೆ.ಆದರೆ ಚಿತ್ರದ ಕೊನೆಯಲ್ಲಿ ಮಕ್ಕಳು ನೋಡಿದ್ದು, ಕೇಳಿದ್ದು ಎಲ್ಲವೂ ಸತ್ಯಕ್ಕೆ ದೂರವಾಗಿರುತ್ತದೆ. 

ಅಂಬಾನಿ ದಿ ಇನ್ವೆಸ್ಟರ್- ಕನ್ನಡ
ವಿನೋದ್ ನಾಗ್ ನಿರ್ದೇಶನ. ದುಡಿದದ್ದೆಲ್ಲಾ ಮದ್ಯಕ್ಕೆ ಖರ್ಚು ಮಾಡುವ ತಂದೆ. ಅಪ್ಪ ಮಾಡುತ್ತಿರುವುದು ತಪ್ಪು ಹಾಗೂ ಈ ಚಟ ಹೇಗಾದರೂ ಮಾಡಿ ಬಿಡಿಸಬೇಕು ಎನ್ನುವ ಮಗ. ಮದ್ಯಪಾನ ಬಿಡುವುದಿಲ್ಲ ಎನ್ನುವ ಅಪ್ಪನ ಹಟಕ್ಕೆ ಅದನ್ನು ತಪ್ಪಿಸಿಯೇ ತಪ್ಪಿಸುತ್ತೀನಿ ಎನ್ನುವ ಮಗನ ಹಟ. ಈ ಇಬ್ಬರ ಹಟದಲ್ಲಿ ಗೆಲ್ಲುವರಾರು? ಮಗ ಅಪ್ಪನನ್ನು ನಿಜವಾಗಿಯೂ ಬದಲಾಯಿಸುತ್ತಾನಾ? ಇದು ಕತೆ. 

ಮಹೊಟು- ಗುಜರಾತಿ
ವಿಜಯಗಿರಿ ಬವ ಈ ಚಿತ್ರದ ಕ್ಯಾಪ್ಟನ್. ಇದೊಂದು ರಾಷ್ಟ್ರ ಪ್ರಶಸ್ತಿ ಪಡೆದ ಕಿರುಚಿತ್ರ. ಸಮಾಜದಲ್ಲಿನ ಅಂಧಾಚರಣೆಗಳಾದ ವರದಕ್ಷಿಣೆ, ಲಿಂಗ ತಾರತಮ್ಯ ಹಲವಾರು ವಿಚಾರಗಳನ್ನಿಟ್ಟುಕೊಂಡು ಚಿತ್ರ ಮಾಡಲಾಗಿದೆ. ಅಲ್ಲದೆ ಇದನ್ನು ಇದೇ ಹೆಸರಿನ ಸ್ಥಳೀಯ ಪುಸ್ತಕವನ್ನು ಆಧರಿಸಿ ಮಾಡಿದ ಚಿತ್ರವಾಗಿದೆ. ಇಂಟರೆಸ್ಟಿಂಗ್‌ನಿಂದ ನೋಡುವ ಪ್ರೇಕ್ಷಕನಿಗೆ ಒಂದು ತಿರುವಿನೊಂದಿಗೆ ಚಿತ್ರ ಕೊನೆಗಾಣಲಿದೆ.

ಸ್ಟ್ರೇಂಜರ್ ಇನ್ ಮೈ ಲ್ಯಾಂಡ್-ಬಹುಭಾಷೆ
ಡುಯು ಟಬ್ಯು ಹೇಳಿದ ಕತೆ. ಹೊರ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರಿಗೆ ಸ್ಥಳೀಯರಿಂದಲೇ ಆಗುತ್ತಿರುವ ತಾರತಮ್ಯಗಳ ಬಗ್ಗೆ ಈ ಚಿತ್ರದಲ್ಲಿ ತಿಳಿಸಲಾಗಿದೆ. ಅಲ್ಲಿ ಭಾರತೀಯರನ್ನು ನೋಡಿಕೊಳ್ಳುವ ರೀತಿ, ಆಹಾರ, ಉಡುಗೆ ತೊಡುಗೆ ಜತೆಗೆ ಈಶಾನ್ಯ ಭಾಗದಿಂದ ವಲಸೆ ಬಂದವರನ್ನು ಅಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನ ಹೇಳುತ್ತೆ ಈ ಚಿತ್ರ.