ಅಪೂರ್ವದ ಪ್ರತಿಭೆ ಈ ಚೆಲುವೆ. ಕ್ರೇಜಿಸ್ಟಾರ್ ರವಿಚಂದ್ರನ್ ಬೆಳ್ಳಿತೆರೆಗೆ ಪರಿಚಯಿಸಿದ ಚಿಕ್ಕಮಲ್ಲಿಗೆ. ಹೆಸರು ಅಪೂರ್ವ. ಕಾಕತಾಳೀಯ ಎನ್ನುವ ಹಾಗೆ ಈ ನಟಿ ಮೊದಲು ನಾಯಕಿ ಆಗಿ ಅಭಿನಯಿಸಿದ ಚಿತ್ರದ ಹೆಸರು ಕೂಡ 'ಅಪೂರ್ವ'. ಎಷ್ಟು ಜನ ನಟಿಯರಿಗೆ ಇಂತಹ ಅದೃಷ್ಟ ಖುಲಾಯಿಸುತ್ತೋ ಗೊತ್ತಿಲ್ಲ. ಆದ್ರೆ ಈಗ ಅಂತಹದೊಂದು ಅದೃಷ್ಟದೊಂದಿಗೆ ಸಿನಿ ಪಯಣ ಶುರು ಮಾಡಿದ ಚೆಲುವೆ ಈಕೆ. ಅಚ್ಚರಿ ಅಂದ್ರೆ ಬೆಳ್ಳಿತೆರೆಗೆ ಮಿಂಚಿನಂತೆ ಬಂದು, ಎರಡು ವರ್ಷ ಕಾಣೆಯಾಗಿದ್ದು ಯಾಕೆ ಎನ್ನುವ ಸಣ್ಣದೊಂದು ಅಪಸ್ವರವೂ ಈ ನಟಿಯ ಮೇಲಿದೆ. ಅದಕ್ಕೆ  ಕಾರಣ ಎಜುಕೇಷನ್. ಹಾಗೆನ್ನುವ  ಸ್ಪಷ್ಟನೆಯೊಂದಿಗೆ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಶರಣ್ ಅಭಿನಯದ 'ವಿಕ್ಟರಿ 2' ಗೆ ನಾಯಕಿ ಆಗಿದ್ದಾರೆ. ಗಂಭೀರ ಪಾತ್ರಗಳಾಚೆ ಗ್ಲಾಮರಸ್ ಲುಕ್‌ಗೂ  ಹೇಳಿ ಮಾಡಿಸಿದಂತಹ ಮೈ ಮಾಟ ಹೊಂದಿರುವ ಅಪೂರ್ವ ಮುಂದೆ ಬ್ಯುಸಿ ಆಗುವ ಎಲ್ಲಾ ಸಾಧ್ಯತೆಗಳಿವೆ. 

1. ಅಪ್ಪಟ್ಟ ಕನ್ನಡತಿ. ಹುಟ್ಟಿದ್ದು, ಬೆಳೆದಿದ್ದು ಚಿಕ್ಕಮಗಳೂರು. ವಿದ್ಯಾಭ್ಯಾಸಕ್ಕೆ ಅಂತ ಬಾಲ್ಯದಲ್ಲೇ ಮೈಸೂರಿಗೆ ಬಂದವಳು, ಮೈಸೂರು ಹುಡುಗಿ ಅಂತಾಗಿದ್ದು ವಿಶೇಷ. ಸದ್ಯಕ್ಕೆ ನಾನಿನ್ನು ವಿದ್ಯಾರ್ಥಿನಿ. ಬಿಕಾಂ ಮುಗಿದಿದೆ. ಇನ್ನಷ್ಟು ಓದಬೇಕಿದೆ. ಸಿನಿಮಾ ಅಂತ ಬ್ಯುಸಿ ಆಗಿರುವ ಕಾರಣ ಕರೆಸ್ಪಾಂಡೆನ್ಸ್ ಏಜುಕೇಷನ್ ಅನಿವಾರ್ಯ. 

2. 'ಅಪೂರ್ವ' ಸಿನಿಮಾ ಬಯಸದೆ ಬಂದ ಭಾಗ್ಯ. ಫಸ್ಟ್ ಪಿಯುಸಿ ಓದುತ್ತಿದ್ದಾಗ ಈ ಚಿತ್ರಕ್ಕೆ ರವಿ ಸರ್ ಆಡಿಷನ್ಸ್ ನಡೆಸುತ್ತಿದ್ದರು. ಹಾಗಂತ ನನ್ನ ಫ್ರೆಂಡ್ಡ್‌ವೊಬ್ಬರು ಮಾಹಿತಿ ಕೊಟ್ಟರು. ಒಂದ್ ಚಾನ್ಸ್ ಯಾಕೆ ಟ್ರೈ ಮಾಡಬಾರದು ಅಂತ ನಕ್ಕು ಹೇಳಿದ್ರು. ರವಿಚಂದ್ರನ್ ಸರ್ ಇಮೇಲ್‌ಗೆ ನಿನ್ನ ಫೋಟೋ ಕಳುಹಿಸಿ, ನೋಡು ಅಂದ್ರು. ಅವರು ಹೇಳಿದಂತೆಯೇ ಮಾಡಿದೆ. ವಾರ ಕಳೆಯುವಷ್ಟರಲ್ಲಿ ರವಿ ಸರ್ ಕಡೆಯಿಂದ ರೆಸ್ಪಾನ್ಸ್ ಬಂತು. ನನ್ನ ಸಿನಿಮಾಕ್ಕೆ ನೀವೇ ನಾಯಕಿ ಅಂತ ಶಾಕ್ ಕೊಟ್ಟರು.

3. ಫಸ್ಟ್ ಟೈಮ್ ನಾಯಕಿ ಅಂತ ಸೆಲೆಕ್ಟ್ ಅದಾಗ ನಾನಿನ್ನು ಪಿಯುಸಿ ವಿದ್ಯಾರ್ಥಿನಿ. ಆಗ ರವಿ ಸರ್ ಎದುರು ನಿಲ್ಲುವುದೆಂದರೆ ತಮಾಷೆನಾ? ಅವರೇನೋ ನೀನೇ ನಾಯಕಿ ಅಂದ್ರು. ಒಳ್ಳೆಯ ಅವಕಾಶ ಅಂತ ಒಪ್ಪಿಕೊಂಡು ಬಿಟ್ಟೆ. ಶೂಟಿಂಗ್ ಅಂತ ಸೆಟ್‌ಗೆ ಹೋಗಿ ನಿಂತಾಗ ನರ್ವಸ್ ಆಗಿಬಿಟ್ಟೆ. ಆಗ ತಮ್ಮ ಮಗಳಂತೆ ಹಾಗಲ್ಲ, ಹೀಗೆ ಧೈರ್ಯದಿಂದ ಇರು ಅಂತೆಲ್ಲ ಹೇಳಿದ್ದು ರವಿ ಸರ್. ಅವರು ಕೊಟ್ಟ ಧೈರ್ಯದಿಂದಲೇ ಆ ಸಿನಿಮಾ ಮುಗಿಸಿ, ಮತ್ತೊಂದು ಸಿನಿಮಾಕ್ಕೆ ಬರುವಂತಾಯಿತು.

4. ನನಗೆ ಹಳೇ ಸಿನಿಮಾಗಳನ್ನು ನೋಡುವ ವಿಪರೀತ ಕ್ರೇಜ್. ಅದರಲ್ಲೂ ಕಲ್ಪನಾ, ಆರತಿ, ಭಾರತಿ, ಮಂಜುಳಾ ಅಭಿನಯದ ಸಿನಿಮಾಗಳಂದ್ರೆ ಪ್ರಾಣ. ಒಂದ್ರೀತಿ ಅವರ ಪ್ರಭಾವಕ್ಕೆ ಒಳಗಾದ ಹುಡುಗಿ ನಾನು. ಅವರ ಹಾಗೆ ಹೆಸರು ಮಾಡದಿದ್ದರೂ, ಅವರು ಅಭಿನಯಿಸಿದಂತಹ ಪಾತ್ರಗಳಲ್ಲಾದರೂ ನಟಿಸಬೇಕು ಎನ್ನುವ ಹುಚ್ಚು. ಅದು ಎಷ್ಟರ ಮಟ್ಟಿಗೆ ನನಸಾಗುತ್ತೋ ಗೊತ್ತಿಲ್ಲ.

5. ಕಲ್ಪನಾ ಹಾಗೂ ಶ್ರೀದೇವಿ ಅಂದ್ರೆ ನಂಗಿಷ್ಟ. ಅವರ ನಟನೆಗೆ ಮನಸೋತಿರುವಷ್ಟು ಇನ್ನಾರಿಗೂ ಇಲ್ಲ. 

-ದೇಶಾದ್ರಿ ಹೊಸ್ಮನೆ