ಬೆಂಗಳೂರು :  ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ ನಾಯಕರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಈ ವಿಚಾರದಲ್ಲಿ ಅವರು ತಪ್ಪು ಮಾಡಿದ್ದಾರೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಮೊದಲು ಚೆಲುವರಾಯಸ್ವಾಮಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್‌ ನಾಯಕರನ್ನು ಕರೆದು ಚರ್ಚಿಸಬೇಕಿತ್ತು. ಲೋಕಸಭೆ ಉಪ ಚುನಾವಣೆಗೆ ಜೆಡಿಎಸ್‌ನಿಂದ ಶಿವರಾಮೇಗೌಡರನ್ನು ನಿಲ್ಲಿಸುವ ವೇಳೆ ಎಲ್ಲರ ಜತೆ ಚರ್ಚೆ ನಡೆಸಿದ್ದರು. ಹೀಗಾಗಿ ಎಲ್ಲಾ ನಾಯಕರು ಹೋಗಿ ಕೆಲಸ ಮಾಡಿದ್ದರು. ಅದರಿಂದಲೇ ಶಿವರಾಮೇಗೌಡ ಭಾರಿ ಅಂತರದಿಂದ ಗೆದ್ದಿದ್ದರು. ಅದೇ ಕೆಲಸವನ್ನು ನಿಖಿಲ್‌ರನ್ನು ಕಣಕ್ಕಿಳಿಸುವಾಗಲೂ ಕುಮಾರಸ್ವಾಮಿ ಮಾಡಬೇಕಿತ್ತು.

ಆದರೆ, ಕುಮಾರಸ್ವಾಮಿ ಅವರು ‘ನಮ್ಮ ಜತೆ ಮೂಲ ಕಾಂಗ್ರೆಸ್ಸಿನವರು ಇದ್ದರೆ ಸಾಕು, ಬೆನ್ನಿಗೆ ಚೂರಿ ಹಾಕುವವರು ಬೇಕಿಲ್ಲ’ ಎಂದೆಲ್ಲಾ ಹೇಳಿಕೆ ನೀಡಿದ್ದರು. ಇದರಿಂದ ಸಹಜವಾಗಿಯೇ ಚೆಲುವರಾಯಸ್ವಾಮಿಗೆ ಬೇಸರ ಮೂಡಿಸಿತ್ತು. ಅದೇ ಕಾರಣಕ್ಕೆ ಅವರು ಪ್ರಚಾರಕ್ಕೆ ಬಾರದೇ ಮನೆಯಲ್ಲೇ ಕುಳಿತುಕೊಂಡರು ಎಂದು ಹೇಳಿದರು.