ಖನ್ನಾ[ಮೇ.14]: 1984 ನಡೆದ ಸಿಖ್‌ ಹತ್ಯಾಕಾಂಡದ ಕುರಿತು ‘ಆಗಿದ್ದು ಆಯಿತು’ ಎಂದು ಉಡಾಫೆಯಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಭಾರೀ ಇರಸುಮುರಸು ಉಂಟುಮಾಡಿದ ತಮ್ಮ ಅತ್ಯಾಪ್ತ ಸ್ಯಾಮ್‌ ಪಿತ್ರೋಡಾ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಮ್ಮೆ ಕಿಡಿಕಾರಿದ್ದಾರೆ. ನಿಮಗೆ ನಾಚಿಕೆಯಾಗಬೇಕು ಎಂದು ರಾಹುಲ್‌ ಬಹಿರಂಗ ಸಭೆಯಲ್ಲೇ ಸ್ಯಾಮ್‌ ವಿರುದ್ಧ ಬೈದಿದ್ದಾರೆ.

ಪಂಜಾಬಿನ ಖನ್ನಾದಲ್ಲಿ ಸೋಮವಾರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಪಿತ್ರೋಡ್‌ ಹೇಳಿಕೆಯಿಂದ ಪಕ್ಷಕ್ಕೆ ಉಂಟಾಗಿರುವ ಹಾನಿಯನ್ನು ತಡೆಯ ಪ್ರಯತ್ನ ಮಾಡಿದರು. ’ಪಿತ್ರೋಡ ನೀಡಿದ ಹೇಳಿಕೆ ಸಂಪೂರ್ಣ ತಪ್ಪು . ಇಂತಹ ಹೇಳಿಕೆ ನೀಡಿದ ಅವರಿಗೆ ನಾಚಿಕೆ ಆಗಬೇಕು. ನಾನು ಇದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದೇನೆ. ಪೋನ್‌ ಮೂಲಕವೂ ತರಾಟೆಗೆ ತೆಗೆದುಕೊಂಡಿದ್ದೇನೆ. ಸಾರ್ವಜನಿಕವಾಗಿ ಕ್ಷಮೆ ಕೋರುವಂತೆಯೂ ಸೂಚಿಸಿದ್ದೇನೆ’ ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಮೇ 19ರಂದು ಕೊನೆಯ ಹಂತದ ಲೋಕಸಭೆ ಚುನಾವಣೆ ನೆರವೇರಲಿದೆ. ಈ ಸಂದರ್ಭದಲ್ಲಿ ಪಿತ್ರೋಡಾ ನೀಡಿರುವ ವಿವಾದಿತ ಹೇಳಿಕೆಯಿಂದ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸಿಖ್‌ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ ಕಾರಣಕ್ಕೆ ಪಿತ್ರೋಡಾ ಅವರು ಕ್ಷಮೆ ಕೇಳುವ ಮೂಲಕ ವಿವಾದವನ್ನು ಅಂತ್ಯಗೊಳಿಸಬೇಕು ಎಂದು ಪಂಜಾಜ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಭಾನುವಾರದಂದು ರಾಹುಲ್‌ ಗಾಂಧಿ ಅವರನ್ನು ಆಗ್ರಹಿಸಿದ್ದರು.