ಬೆಂಗಳೂರು

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ಕುರಿತು ಮತದಾನ ಮುಕ್ತಾಯಗೊಳ್ಳುವ 48 ಗಂಟೆ ಮುನ್ನ ಮಾಧ್ಯಮಗಳಲ್ಲಿ ಘೋಷಣೆ ಮಾಡಿಕೊಳ್ಳಬೇಕು ಎಂದು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ತಾಕೀತು ಮಾಡಿದೆ.

ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ಬಗ್ಗೆ ಮೂರು ಮಾಧ್ಯಮಗಳಲ್ಲಿ ಘೋಷಣೆ ಮಾಡಿಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈವರೆಗೆ ಬಹುತೇಕ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಘೋಷಣೆ ಮಾಡಿಕೊಳ್ಳಲು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ತಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ಹೊಂದಿರುವ ಎಲ್ಲಾ ಅಭ್ಯಥಿಗಳು ಮೂರು ದಿನಪತ್ರಿಕೆ ಮತ್ತು ಮೂರು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಘೋಷಿಸಿಕೊಳ್ಳಬೇಕು. ಮತದಾನದ 48 ಗಂಟೆಯ ಮೊದಲು ಇದು ಪ್ರಕಟವಾಗಿರಬೇಕು. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮೇಲೆ ಈ ಜವಾಬ್ದಾರಿ ಇದೆ. ಒಂದು ವೇಳೆ ಸೂಚನೆಯನ್ನು ಪಾಲಿಸದೆ ಇದ್ದಲ್ಲಿ ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸುವಲ್ಲಿ ವೈಫಲ್ಯ ಎಂದು ಪರಿಗಣಿಸಲಾಗುವುದು. ಅಲ್ಲದೇ, ಸೂಕ್ತವಾಗಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ರಾಜಕೀಯ ಪಕ್ಷಗಳ ಸಭೆಗಳನ್ನು ನಡೆಸಲಾಗಿದ್ದು, ಸಭೆಯಲ್ಲಿ ನಿಯಮಗಳ ಕುರಿತು ವಿವರಣೆ ನೀಡಲಾಗಿದೆ. ಬಾಕಿ ಉಳಿದಿರುವ ಪ್ರಕರಣ ಅಥವಾ ಈ ಮೊದಲು ಶಿಕ್ಷೆ ವಿಧಿಸಲ್ಪಟ್ಟಪ್ರಕರಣಗಳ ವಿವರವನ್ನು ಸಹ ನೀಡಬೇಕಾಗಿದೆ. ಎಲ್ಲ ವಿವರವನ್ನು ಚುನಾವಣಾಧಿಕಾರಿ ಮುಂದೆ ಘೋಷಿಸಬೇಕು. ಆಯೋಗದ ಸೂಚನೆಗಳನ್ನು ಪಾಲನೆ ಮಾಡದಿರುವುದು ಕಂಡು ಬಂದರೆ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸುವ ಅಥವಾ ವಾಪಸ್‌ ಪಡೆದುಕೊಳ್ಳುವ ಅಧಿಕಾರವನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ವಿವರಿಸಿದರು.

ಮುದ್ರಣ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಜಾಹೀರಾತುಗಳನ್ನು ನೀಡುವುದಾದರೆ ಮತದಾನ ದಿನದ 48 ಗಂಟೆ ಮೊದಲು ನೀಡಬೇಕು. ನಂತರದ ಜಾಹೀರಾತು ನೀಡಬೇಕಾದರೆ ಚುನಾವಣಾ ಆಯೋಗದಿಂದ ರಾಜಕೀಯ ಜಾಹೀರಾತುಗಳ ಪೂರ್ವ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ವಿದ್ಯುನ್ಮಾನ ಮಾಧ್ಯಮಗಳು ಸಹ ಯಾವುದೇ ಚರ್ಚೆಗಳನ್ನು ನಡೆಸುವಂತಿಲ್ಲ ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.