ಲಖನೌ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ತಮ್ಮ ಸೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರಾ ಎಂಬ ಕುರಿತು ಖಚಿತ ಉತ್ತರ ನೀಡಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಿರಾಕರಿಸಿದ್ದಾರೆ. ‘ನಿಮ್ಮನ್ನು ಸಸ್ಪೆನ್ಸ್‌ನಲ್ಲಿಡುತ್ತೇನೆ. ಸಸ್ಪೆನ್ಸ್‌ ಎಂಬುದು ಯಾವಾಗಲೂ ಕೆಟ್ಟದೇನಲ್ಲ’ ಎಂದು ಅವರು ಆಂಗ್ಲದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪೂರ್ವ ಉತ್ತರಪ್ರದೇಶದ ಉಸ್ತುವಾರಿ ಹೊಣೆ ಹೊತ್ತಿರುವ ಪ್ರಿಯಾಂಕಾ ವಾದ್ರಾ ಅವರು, ಆ ವ್ಯಾಪ್ತಿಯಲ್ಲಿ ಬರುವ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ತಾಯಿ ಸೋನಿಯಾ ಗಾಂಧಿ ಕ್ಷೇತ್ರ ರಾಯ್‌ಬರೇಲಿಗೆ ಪ್ರಿಯಾಂಕಾ ಭೇಟಿ ನೀಡಿದ್ದಾಗ ‘ರಾಯ್‌ಬರೇಲಿಯಿಂದ ಸ್ಪರ್ಧೆ ಮಾಡಿ’ ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು.

ಆಗ ‘ವಾರಾಣಸಿ ಯಾಕಾಗಬಾರದು?’ ಎಂದು ಪ್ರಶ್ನಿಸುವ ಮೂಲಕ ಮೋದಿ ವಿರುದ್ಧ ಸ್ಪರ್ಧೆ ಚರ್ಚೆಗೆ ಪ್ರಿಯಾಂಕಾ ನಾಂದಿ ಹಾಡಿದ್ದರು.