ಪುಲ್ವಾಮಾ ದಾಳಿ ಪ್ರಸ್ತಾಪಕ್ಕೆ ಆಯೋಗ ತಡೆ ಹಾಕಿದ್ದಕ್ಕೆ ಆಕ್ರೋಶ| ಅಧಿಕಾರಕ್ಕೆ ಬಂದರೆ ಚುನಾವಣಾ ಆಯುಕ್ತರ 2 ದಿನ ಜೈಲಿಗಟ್ಟುವೆ! ಅಂಬೇಡ್ಕರ್‌ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ವಿವಾದಿತ ಹೇಳಿಕೆ

ಮುಂಬೈ[ಏ.05]: ತಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಚುನಾವಣಾ ಆಯುಕ್ತರನ್ನು ಎರಡು ದಿನ ಜೈಲಿಗೆ ಹಾಕುವುದಾಗಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗ ಮತ್ತು ‘ವಂಚಿತ್‌ ಬಹುಜನ ಅಘಾಡಿ’ ಪಕ್ಷದ ನೇತಾರ ಪ್ರಕಾಶ್‌ ಅಂಬೇಡ್ಕರ್‌ ಎಚ್ಚರಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಈ ಹೇಳಿಕೆ ಕುರಿತು ಚುನಾವಣಾ ಆಯೋಗ ಕೂಡಾ ಅಧಿಕಾರಿಗಳಿಂದ ವರದಿ ಕೇಳಿದೆ.

ಬುಧವಾರ ಯವತ್ಮಾಲ್‌ ಜಿಲ್ಲೆಯ ನಾಂದೇಡ್‌ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್‌ ಅಂಬೇಡ್ಕರ್‌, ‘ಪುಲ್ವಾಮಾ ದಾಳಿಯಲ್ಲಿ ನಾವು 40 ಯೋಧರನ್ನು ಕಳೆದುಕೊಂಡಿದ್ದೇವೆ, ಆದರೂ ಮೌನವಾಗಿ ಕುಳಿತುಕೊಂಡಿದ್ದೇವೆ. ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡದಂತೆ ನಮಗೆ ಸೂಚಿಸಲಾಗಿದೆ. ಚುನಾವಣಾ ಆಯೋಗ ನಮ್ಮ ಮೇಲೆ ಇಂಥ ನಿಷೇಧ ಹೇರುವುದಕ್ಕೆ ಹೇಗೆ ಸಾಧ್ಯ? ನಮ್ಮ ಸಂವಿಧಾನ ನಮಗೆ ಮಾತನಾಡುವ ಹಕ್ಕನ್ನು ಕಲ್ಪಿಸಿದೆ. ನಾನೇನು ಬಿಜೆಪಿಯವನಲ್ಲ. ನಮ್ಮನ್ನು ಅಧಿಕಾರಕ್ಕೆ ತಂದರೆ, ಚುನಾವಣಾ ಆಯುಕ್ತರನ್ನು ಎರಡು ದಿನ ಜೈಲಿಗೆ ಅಟ್ಟುವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರಕಾಶ್‌ ಅಂಬೇಡ್ಕರ್‌ ಅವರು ಸೊಲ್ಲಾಪುರ ಮತ್ತು ಅಕೋಲಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಇನ್ನು ಅವರ ಪಕ್ಷ ಮಹಾರಾಷ್ಟ್ರದ 48 ಸ್ಥಾನಗಳಲ್ಲಿ ಕಣಕ್ಕೆ ಇಳಿದಿದೆ.