ಗುರುದಾಸ್‌ಪುರ[ಮೇ.04]: ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಅವರನ್ನು ಕಣಕ್ಕಿಳಿಸಿ ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿಗೆ ಚಿತ್ರನಟನ ನೈಜ ಹೆಸರು ಕೇಳಿ ಚಿಂತೆ ಶುರುವಾಗಿದೆ.

ಸನ್ನಿ ಡಿಯೋಲ್‌ ಅವರು ನಾಮಪತ್ರದಲ್ಲಿ ‘ಅಜಯ್‌ ಸಿಂಗ್‌ ಧರ್ಮಿಂದರ್‌ ಡಿಯೋಲ್‌’ ಎಂಬ ತಮ್ಮ ನೈಜ ಹೆಸರನ್ನು ಬರೆದಿದ್ದಾರೆ. ಅದೇ ಹೆಸರು ವಿದ್ಯುನ್ಮಾನ ಮತಯಂತ್ರಗಳ ಮೇಲೂ ಮುದ್ರಣವಾಗುತ್ತದೆ. ಜನತೆಗೆ ಸನ್ನಿ ಡಿಯೋಲ್‌ ಎಂದರೆ ಥಟ್ಟನೆ ಗೊತ್ತಾಗುತ್ತದೆ. ಆದರೆ ಅಜಯ್‌ ಸಿಂಗ್‌ ಧರ್ಮಿಂದರ್‌ ಡಿಯೋಲ್‌ ಎಂದರೆ ಮತದಾನ ಮಾಡುವಾಗ ಗೊಂದಲಕ್ಕೆ ಒಳಗಾಗಬಹುದು ಎಂಬ ಆತಂಕ ಬಿಜೆಪಿ ಪಾಳಯದಲ್ಲಿ ಕಂಡುಬರುತ್ತಿದೆ. ಹೀಗಾಗಿ ಇವಿಎಂ ಮೇಲೆ ಸನ್ನಿ ಡಿಯೋಲ್‌ ಎಂಬ ಹೆಸರನ್ನೇ ನಮೂದಿಸುವಂತೆ ಚುನಾವಣಾ ಆಯೋಗಕ್ಕೆ ಮೊರೆ ಹೋಗಿದೆ.

ನಿಯಮಗಳ ಪ್ರಕಾರ, ನಾಮಪತ್ರದಲ್ಲಿರುವ ಹೆಸರನ್ನೇ ಇವಿಎಂಗಳ ಮೇಲೆ ಅಳವಡಿಸಲಾಗುತ್ತದೆ. ಆದರೆ ಕೆಲವೊಂದು ನಿಯಮಗಳಡಿ ಬೇರೆ ಹೆಸರನ್ನೂ ಬಳಸಲು ಅವಕಾಶವಿದೆ. ಅದನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.