ಕೋಲಾರ, [ಮಾ.24]: ಕೋಲಾರ ಬಿಜೆಪಿ ಅಭ್ಯರ್ಥಿಯಾಗಿ ಮುನಿಸ್ವಾಮಿ ಹೆಸರನ್ನು ಪಕ್ಷ ಘೋಷಣೆ ಮಾಡಿದ ನಂತರ, ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಡಿ.ಎಸ್. ವೀರಯ್ಯ ಬಂಡಾಯದ ಬಾವುಟ ಹಾರಿಸಿದ್ದಾರೆ. ಬೆಂಗಳೂರು ಕಾರ್ಪೋರೇಟರ್‌ ಮುನಿಸ್ವಾಮಿಗೆ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡಿದ್ದರಿಂದ ಡಿ.ಎಸ್. ವೀರಯ್ಯ ಅಸಮಾಧನಗೊಂಡಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನಲೆ ಬಂಡಾಯವಾಗಿ ನಾಳೆ [ಸೋಮವಾರ] ನಾಮಪತ್ರ ಸಲ್ಲಿಸಲು ಡಿ.ಎಸ್. ವೀರಯ್ಯ ತಿರ್ಮಾನಿಸಿದ್ದು, ಪಕ್ಷದ ನಾಯಕರ ನಿದ್ದೆಗೆಡಿಸಿದೆ.

ಇನ್ನು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ವೀರಯ್ಯ, ಬಹುನಿರೀಕ್ಷೆಯಲ್ಲಿ ಇದ್ದೆ, ತನಗೆ ಟಿಕೆಟ್ ಸಿಗಬಹುದು ಎಂದು. ಆದ್ರೆ ವರಿಷ್ಠರು ನನಗೆ ನೀಡದೆ ಹೊಸ ಅಭ್ಯರ್ಥಿಗೆ ಟಿಕೇಟ್ ನೀಡಿದ್ದು ತನಗೆ ಬೇಸರ ತಂದಿದೆ.

ಎರಡು ಬಾರಿ ಸ್ಪರ್ಧೆ ಮಾಡಿ‌ ಕಡಿಮೆ ಅಂತರದಲ್ಲಿ ಸೋಲಬೇಕಾಯಿತು. ಆದ್ರೂ ಕ್ಷೇತ್ರದಲ್ಲಿ ನಿರಂತರವಾಗಿ ಇದ್ದೇನೆ. ಈ ಬಾರಿ ಸಿಗುವ ನಿರೀಕ್ಷೆ ಹುಸಿಯಾಗಿದೆ. ಇದರಿಂದ ನನ್ನ ಹಾಗೂ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ. ಕಾರ್ಯಕರ್ತರ ಒತ್ತಾಯದಿಂದ‌ ನಾಳೆ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.