ತುಮಕೂರು, (ಮಾ.23): ಜೆಡಿಎಸ್ ಪಾಲಾಗಿರುವ ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದ್ರೆ ಇದೀಗ ಹಾಲಿ ಕಾಂಗ್ರೆಸ್ ಸಂಸದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಳಿಯಲು ಮುಂದಾಗಿದ್ದು, ದೊಡ್ಡಗೌಡ್ರ ನಿದ್ದೆಗೆಡಿಸಿದೆ.

ಇನ್ನು ಈ ಬಗ್ಗೆ ಹೆಬ್ಬೂರು ತೋಟದ ಮನೆಯಲ್ಲಿ ಬೆಂಬಲಿಗರ ಸಭೆ ಬಳಿಕ ಮಾತನಾಡಿದ ಮುದ್ದಹನುಮೇಗೌಡ ಅವರು, 'ನಾನು ಕಾಂಗ್ರೆಸ್​ನಿಂದ ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ಒಂದು ವೇಳೆ ಬಿ-ಫಾರಂ ಸಿಗದಿದ್ರೆ ಸೋಮವಾರ ಮಾತನಾಡುತ್ತೇನೆ ಎನ್ನುವ ಮೂಲಕ ದೇವೇಗೌಡ್ರ ವಿರುದ್ಧ ರಣಕಹಳೆ ಊದಿದರು.

ದೇವೇಗೌಡ ಸ್ಪರ್ಧಿಸೋ ಕ್ಷೇತ್ರ ಫೈನಲ್, ನಾಮಪತ್ರ ಸಲ್ಲಿಸಲು ಮುಹೂರ್ತವೂ ಫಿಕ್ಸ್

 ರಾಜ್ಯದ ಕಾಂಗ್ರೆಸ್​ ಹಿರಿಯ ನಾಯಕರು ತುಮಕೂರು ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದೇವೆ ಎಂದು ನನ್ನ ಬಳಿ ಹೇಳಿದರು. ಅದಕ್ಕೆ ನಮ್ಮ ನಾಯಕರನ್ನ ಭೇಟಿ ಮಾಡಿ ನನ್ನ ಸೀಟು ಬಿಟ್ಟು ಕೊಟ್ಟಿದ್ದಕ್ಕೆ ಕಾರಣ ಕೊಡಿ ಎಂದು ಕೇಳಿದ್ದೇನೆ. 

ಸಂಸದನಾಗಿ ಐದು ವರ್ಷ ಜನರ ನಡುವೆ ಇದ್ದು ದುಡಿದಿದ್ದೇನೆ. ನನ್ನ ಕೆಲಸವನ್ನ ಎಲ್ಲಾ ವರಿಷ್ಠರು ನೋಡಿದ್ದಾರೆ. ಎಲ್ಲಿಯೂ ಕೂಡ ಒಂದಿಷ್ಟು ಭ್ರಷ್ಟಾಚಾರ ಮಾಡದಂತೆ ಕೆಲಸ ‌ಮಾಡಿದ್ದೇನೆ. ಹೀಗಾಗಿ ನಾನು ಸೋಮವಾರ ನಾಮಪತ್ರ ಸಲ್ಲಿಕೆ ಮಾಡುತ್ತೆನೆ ಎಂದರು.

ನನ್ನನ್ನ ಕ್ರಿಯಾಶೀಲ ಸಂಸದ ಎಂದು ಹೊಗಳಿ ಬಲಿಪಶುಮಾಡಿದ್ದಾರೆ. ಆದ್ದರಿಂದ ನಾನು ಜನತಾ ನ್ಯಾಯಾಲಯದ ಮುಂದೆ ಹೋಗಲು ನಿರ್ದರಿಸಿದ್ದೇನೆ ಎಂದು ತಮ್ಮ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.