ಗೋಕಾಕ: ಗಣಿನಾಡು ಬಳ್ಳಾರಿಯಿಂದ ಮಾಜಿ ಶಾಸಕ ರಮೇಶ ಜಾರಕಿಹೊಳಿ ಅವರ ಸಹೋದರ, ಉದ್ಯಮಿ ಲಖನ್‌ ಜಾರಕಿಹೊಳಿ ಅವರು ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಕ್ಕೆ ಇದೀಗ ತೆರೆ ಬಿದ್ದಿದೆ. 

ಈ ಬಗ್ಗೆ ಮೌನ ಮುರಿದಿರುವ ಉದ್ಯಮಿ ಜಾರಕಿಹೊಳಿ, ‘ನಾನು ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು. 

ಮಾತ್ರವಲ್ಲ, ಬಿಜೆಪಿ ಸೇರುವುದಿಲ್ಲ ಎಂದ ಮೇಲೆ ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮಾತೆಲ್ಲಿ ಎಂದು ಪ್ರಶ್ನಿಸಿದರು. ಕಳೆದ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನಾನು ಬಿಜೆಪಿ ಸೇರುವುದಾಗಿ ಸುದ್ದಿಯಾಗುತ್ತಿದೆ. 

ಆದರೆ, ಈ ಸುದ್ದಿ ಶುದ್ಧ ಸುಳ್ಳು. ಬಿಜೆಪಿ ಸೇರುವುದೇ ಆಗಿದ್ದರೆ ಈ ಹಿಂದೆ ಎರಡು ಬಾರಿ ಯಮಕನಮರಡಿ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗುತ್ತಿದ್ದೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು. ಹೀಗಾಗಿ ಕಾಂಗ್ರೆಸ್‌ ಪಕ್ಷ ತೊರೆಯುವ ಮಾತಿಲ್ಲ ಎಂದು ಹೇಳಿದರು.