ವಿಜಯಪುರ, [ಏ.21]: ನನಗೂ ಮುಖ್ಯಮಂತ್ರಿಯಾಗುವ ಆಸೆಯಿದೆ. ಆದರೆ ದುರಾಸೆಯಿಲ್ಲ ಎಂದು ಗೃಹ ಸಚಿವ ಎಂ.ಬಿ ಪಾಟೀಲ್‌ ಹೇಳಿದ್ದಾರೆ. 

ವಿಜಯಪುರದ ಬಬಲೇಶ್ವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸಿಎಂ ಆಗುವ ಆಸೆ ಎಲ್ಲರಿಗೂ ಇರುತ್ತದೆ. ನನಗೂ ಸಿಎಂ ಆಗೋ ಆಸೆ ಇದೆ. ಆದ್ರೆ ದುರಾಸೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನಂತರ ನನ್ನ ಸರದಿ ಇದೆ. ಅದಕ್ಕಾಗಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದ್ಮೇಲೆ ನಾನು ಸಿಎಂ ಆಗ್ತೇನೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ತಮ್ಮ ಮನದಾಳದ ಬಿಚ್ಚಿಟ್ಟಿದ್ದಾರೆ .

ಸಿಎಂ ಕುರ್ಚಿ ಮೇಲೆ ಡಿಕೆಶಿಯಿಂದಲೂ ಟವೆಲ್?

ಇನ್ನು ಇದೇ ವೇಳೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಎಂ,ಬಿ.ಪಾಟೀಲ್, 'ನನ್ನ ಸಂಬಂಧಿಕರು ಹಾಗೂ ಸ್ನೇಹಿತರ ಮನೆ ಮೇಲೆ ನಾಳೆಯೂ ಐಟಿ ದಾಳಿ ಆಗಬಹುದು. ಅವರ ಮನೆಯಲ್ಲಿ 6 ಲಕ್ಷ ನಗದು ಇರಬಹುದು. ಆಪರೇಷನ್ ಕಮಲ ಮಾಡುವರ ಮನೆಯಲ್ಲೂ ಐಟಿ ದಾಳಿ ಆಗಲಿ. ಕೋಟಿಗಟ್ಟಲೆ ಡೀಲ್ ಮಾಡುವವರ ಮೇಲೆ ದಾಳಿ ಆಗಲಿ' ಎಂದರು. 

ಐಟಿ ಇಲಾಖೆ ಮಹತ್ವ ಕಳೆದುಕೊಂಡಿದೆ. ಐಟಿ ಇಲಾಖೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ. ಎದುರಾಳಿಗಳ ಮೇಲೆ ಐಟಿ ದಾಳಿ ಸರಿಯಲ್ಲ. ಇದು ಹೀಗೆ ಇರೋದಿಲ್ಲ. ಕಾಲಚಕ್ರ ತಿರುಗುತ್ತಲೇ ಇರುತ್ತದೆ ಎಂದು ಪಾಟೀಲ್‌ ಕಿಡಿ ಕಾರಿದರು.