ನವದೆಹಲಿ[ಏ.27]: ಉತ್ತರಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕೆ ಇಳಿಯುವ ಸುಳಿವು ನೀಡಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕೊನೆಗೆ ತಾವೇ ಸ್ಪರ್ಧಿಸದೇ ಇರುವ ನಿರ್ಧಾರ ಕೈಗೊಂಡರು ಎಂದು ಬೆಳಕಿಗೆ ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆಪ್ತ ಸ್ಯಾಮ ಪಿತ್ರೋಡಾ, ವಾರಾಣಸಿಯಲ್ಲಿ ಸ್ಪರ್ಧೆ ಮಾಡುವ ಮುಕ್ತ ಅವಕಾಶವನ್ನು ರಾಹುಲ್‌ ಗಾಂಧಿ ಅವರು ಪ್ರಿಯಾಂಕಾಗೆ ನೀಡಿದ್ದರು. ಆದರೆ ಈ ಕುರಿತು ನಿರ್ಧಾರ ಕೈಗೊಳ್ಳುವ ಅಂತಿಮ ಹೊಣೆಯನ್ನು ಸ್ವತಃ ಪ್ರಿಯಾಂಕಾಗೆ ವಹಿಸಿದ್ದರು.

ಕಾಶಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸದಿರಲು 5 ಕಾರಣಗಳು!

ಆದರೆ ತಾವು ವಾರಾಣಸಿಯಲ್ಲಿ ಕಣಕ್ಕೆ ಇಳಿದರೆ ಉತ್ತರಪ್ರದೇಶದ ಇತರೆ ಭಾಗಗಳಲ್ಲಿ ಪ್ರಚಾರಕ್ಕೆ ತೆರಳುವುದು ಮತ್ತು ಅಲ್ಲಿಯ ಉಸ್ತುವಾರಿ ನೋಡಿಕೊಳ್ಳುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಸ್ಪರ್ಧಿಸದೇ ಇರುವ ನಿರ್ಧಾರಕ್ಕೆ ಪ್ರಿಯಾಂಕಾ ಬಂದರು. ಇದನ್ನು ಹೊರತುಪಡಿಸಿ, ಪ್ರಿಯಾಂಕಾ ಗೆಲುವಿನ ಬಗ್ಗೆ ರಾಹುಲ್‌ಗೆ ಅನುಮಾನವಿತ್ತು. ಹೀಗಾಗಿ ಸ್ವತಃ ರಾಹುಲ್‌ ಅವರೇ ಪ್ರಿಯಾಂಕಾರನ್ನು ಸ್ಪರ್ಧಿಸದಂತೆ ತಡೆದರು ಎಂಬುದೆಲ್ಲಾ ಸುಳ್ಳು ಎಂದು ಪಿತ್ರೋಡಾ ಸ್ಪಷ್ಟಪಡಿಸಿದ್ದಾರೆ.

ವಾರಾಣಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕೆ ಇಳಿಸಿದೆ.