ರಾಯ್‌ ಬರೇಲಿ: ಈ ಬಾರಿ ಲೋಕಸಭಾ ಚುನಾವಣೆ ಕಣಕ್ಕೆ ಇಳಿಯುವುದೇ ಇಲ್ಲ ಎನ್ನುತ್ತಿದ್ದ ಪ್ರಿಯಾಂಕಾ ಗಾಂಧಿ, ಪಕ್ಷ ಸೂಚಿಸಿದರೆ ಕಣಕ್ಕೆ ಇಳಿಯಲು ಸಿದ್ಧ ಎಂದು ಬುಧವಾರ ಹೇಳಿದ್ದರು. ಇದರ ಮುಂದುವರೆದ ಭಾಗವಾಗಿ ಅವರೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಕಣಕ್ಕೆ ಇಳಿಯುವ ಸಣ್ಣ ಸುಳಿವು ನೀಡಿದ್ದಾರೆ.

ತಮ್ಮ ತಾಯಿ ಸ್ಪರ್ಧಿಸುತ್ತಿರುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪ್ರಿಯಾಂಕಾ ಗುರುವಾರ ಆಗಮಿಸಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತರೊಬ್ಬರು ನೀವೇ ರಾಯ್‌ ಬರೇಲಿಯಿಂದ ಸ್ಪರ್ಧಿಸಿ ಎಂದು ಆಹ್ವಾನ ನೀಡಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಪ್ರಿಯಾಂಕಾ ವಾರಾಣಾಸಿ ಏಕಾಗಬಾರದು ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಇದು ತಕ್ಷಣವೇ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಅವರ ಇಂಥ ಹೇಳಿಕೆ ವಾರಾಣಸಿಯಿಂದ ಸ್ಪರ್ಧೆ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರಮೋದಿ ಅವರಿಗೆ ನೀಡಿರುವ ಟಾಂಗ್‌ ಆಗಿರಲೂ ಬಹುದು ಅಥವಾ ಅವರೇ ಸ್ವತಃ ಕಣಕ್ಕೆ ಇಳಿದರೂ ಇಳಿಯಬಹುದು ಎನ್ನಲಾಗಿದೆ.

ವಾರಾಣಸಿ ಕ್ಷೇತ್ರಕ್ಕೆ ಇದುವರೆಗೆ ಬಿಎಸ್‌ಪಿ-ಎಸ್‌ಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ.