ಮಂಡ್ಯ :  ಸ್ವಾಭಿಮಾನದ ಗುರಾಣಿ ಹಿಡಿದು ಜೆಡಿಎಸ್ ಭದ್ರ ಕೋಟೆ ಛಿದ್ರಗೊಳಿಸಿದ ಮಾಜಿ ಸಚಿವ ದಿ.ಅಂಬರೀಷ್ ರ ಪತ್ನಿ ಸುಮಲತಾರ ಮುಂದಿನ ರಾಜಕೀಯ ಆಯ್ಕೆ ಬಗ್ಗೆ ಕುತೂಹಲ ಮೂಡಿದೆ. ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಭರ್ಜರಿಯಾಗಿ ಮಣಿಸಿ ಲೋಕಸಭೆ ಪ್ರವೇಶಿಸಿರುವ ಸುಮಲತಾ, ಭವಿಷ್ಯದಲ್ಲಿಯೂ ಸ್ವತಂತ್ರವಾಗಿ ರಾಜಕೀಯ ಯಾತ್ರೆ ಮುಂದುವರಿಸುತ್ತಾರಾ ಅಥವಾ ತಮ್ಮ ಗೆಲುವಿನಲ್ಲಿ ಪಾತ್ರವಹಿಸಿರುವ ಕಾಂಗ್ರೆಸ್,ಬಿಜೆಪಿ ಪೈಕಿ ಯಾವುದಕ್ಕೆ ಜಿಗಿಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಪಕ್ಷದ ಹೈಕಮಾಂಡ್ ವಿರೋಧ ಗಣನೆಗೆ ತೆಗೆದುಕೊ ಳ್ಳದ ಮಂಡ್ಯ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರು, ಸುಮಲತಾ ಅವರ ಗೆಲುವಿಗೆ ತೆರೆಮರೆಯಲ್ಲಿ ಭಾರಿ ಹೋರಾಟ ನಡೆಸಿದ್ದರು. ಇತ್ತ ಹಳೇ ಮೈಸೂರು ಭಾಗದ ಜೆಡಿಎಸ್ ಕೋಟೆ ಭೇದಿಸಲು ಹವಣಿಸುತ್ತಿರುವ ಬಿಜೆಪಿ, ಈಗ ಸುಮಲತಾ ಮೂಲಕ ಸಕ್ಕರೆ ನಾಡಲ್ಲಿ ಪಕ್ಷ ಬಲಕ್ಕೆ ಯತ್ನಿಸಬಹುದು. ಹೀಗಾಗಿ ತಮಗೆ ರಾಜಕೀಯ ಶಕ್ತಿ ನೀಡಿದ ಎರಡು ಭಿನ್ನ ಸೈದ್ಧಾಂತಿಕತೆ ಗಳಲ್ಲಿ ಯಾವುದು ಸುಮಲತಾರ ಆಯ್ಕೆಯಾಗಿರುತ್ತದೆ ಎಂಬುದು ಚರ್ಚೆ ಹುಟ್ಟು ಹಾಕಿದೆ.

ಪಕ್ಷಗಳ ಆಶ್ರಯವಿಲ್ಲದೆ ಸ್ವತಂತ್ರವಾಗಿಯೇ ಅವರು ರಾಜಕಾರಣ ಮುಂದುವರೆಸಲು ನಿರ್ಧರಿಸಬಹುದು. ಭವಿಷ್ಯದ ದೃಷ್ಟಿಯಿಂದ ಅದು  ಕಠಿಣವೂ ಆದೀತು. ಮೊದಲಿನಿಂದಲೂ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಅಬ್ಬರದಲ್ಲಿ ಶಕ್ತಿ ಕಳೆದುಕೊಂಡಿದ್ದ ಕಾಂಗ್ರೆಸ್ಸಿಗರು, ಸುಮಲತಾ ಅವರ ಗೆಲುವಿನ ಮೂಲಕ ಹೊಸ ಚೈತನ್ಯ ಪಡೆದುಕೊಂಡಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ  ನೆರವಿನ ಋಣವನ್ನೇ ಮುಂದಿಟ್ಟು ಸುಮಲತಾಅಂಬರೀಷ್ ಅವರನ್ನು ಕಾಂಗ್ರೆಸ್ಸಿಗರು ಸೆಳೆಯಲು ಯತ್ನಿಸಬಹುದು ಎನ್ನಲಾಗುತ್ತಿದೆ.