ಬೆಂಗಳೂರು : ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಇಬ್ಬರು ಮೊಮ್ಮಕ್ಕಳು ಒಟ್ಟಾಗಿ ರಾಜಕೀಯಕ್ಕೆ ಧುಮುಕಿದರೂ ಅವರ ಕುಟುಂಬಕ್ಕೆ ಸಿಹಿ-ಕಹಿ ಅನುಭವಾಗಿದ್ದು, ತಮ್ಮ ಭದ್ರಕೋಟೆ ಯಲ್ಲಿಯೇ ಸೋಲನುಭವಿಸಿದ ನಿಖಿಲ್ ಕುಮಾರಸ್ವಾಮಿಯನ್ನು ಸಕ್ರಿಯ ರಾಜಕಾರಣ ದಲ್ಲಿ ತೊಡಗಿಸಿಕೊಳ್ಳುವ ಲೆಕ್ಕಾಚಾರ ಕುಟುಂಬದಲ್ಲಿ ಪ್ರಾರಂಭವಾಗಿದೆ.

ಎಂಟು ಶಾಸಕರು, ಮೂರು ಸಚಿವರು, ಮೂವರು ವಿಧಾನಪರಿಷತ್ ಸದಸ್ಯರು ಇರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜಯಗಳಿಸಲಿದ್ದಾರೆ ಎಂಬ ಅತಿ ವಿಶ್ವಾಸ ಹುಸಿಯಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಪ್ರಚಾರ ಕೈಗೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಮೈತ್ರಿ ಸರ್ಕಾರಕ್ಕೆ ಸಡ್ಡು ಹೊಡೆದು ಸ್ವಾಭಿಮಾನದ ಭಿಕ್ಷೆ ಬೇಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದಾರೆ.

ತಾತ ಬಿಟ್ಟುಕೊಟ್ಟ ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸುಲಭದ ಗೆಲುವಿನ ನಗೆ ಬೀರಿ ಸಂಸತ್‌ಗೆ ಪ್ರವೇಶಿಸಿದರೆ, ಅಬ್ಬರದ ಪ್ರಚಾರ ನಡೆಸಿದರೂ ನಿಖಿಲ್ ಕುಮಾರಸ್ವಾಮಿ ಸೋಲಿನ ರುಚಿ ಕಂಡಿದ್ದಾರೆ. ಪ್ರಜ್ವಲ್ ರೇವಣ್ಣ ರಾಜಕಾರಣದಲ್ಲಿ ಮುಂದುವರಿಯುವ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಯಾವ ರೀತಿಯಲ್ಲಿ ರಾಜಕಾರಣದಲ್ಲಿ ಮುಂದುವರಿಸಬೇಕು ಎಂಬ ಚಿಂತನೆಗಳು ಆರಂಭವಾಗಿವೆ.

ಮೇಲ್ಮನೆ ಸದಸ್ಯರಾಗಿ ಮಾಡುವ ಬಗ್ಗೆ ವದಂತಿಗಳೂ ಕೇಳಿಬಂದಿವೆ. ಆದರೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎಂದಿಗೂ ಹಿಂಬಾಗಿಲ ಮೂಲಕ ರಾಜಕಾರಣಕ್ಕೆ ಪ್ರವೇಶಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮೇಲ್ಮನೆ ಸದಸ್ಯರನ್ನಾಗಿ ಮಾಡುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗಿದೆ.

ರಾಜಕಾರಣದಲ್ಲಿ ನಿಖಿಲ್ ಕುಮಾರಸ್ವಾಮಿಅವರನ್ನು ಮುಂದುವರಿಸುವ ಸಂಬಂಧ ಜೆಡಿಎಸ್‌ನಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ರಾಜ್ಯ ಅಥವಾ ರಾಷ್ಟ್ರ ರಾಜಕಾರಣದಲ್ಲಿ ಪ್ರವೇಶಕ್ಕೆ ಅನುವು ಮಾಡಿಕೊಡಲು ಪಕ್ಷದಲ್ಲಿ ಸ್ಥಾನ-ಮಾನ ನೀಡುವ ಲೆಕ್ಕಾಚಾರ ನಡೆದಿದೆ. 

ಶೀಘ್ರದಲ್ಲಿಯೇ ಈ ಬಗ್ಗೆ ಜೆಡಿಎಸ್ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಬಲವರ್ಧನೆ ಮಾಡುವುದರ ಜತೆಗೆ ಮಂಡ್ಯ ಕ್ಷೇತ್ರದಲ್ಲಿ ನೆಲೆಯೂರುವ ಪ್ರಯತ್ನವನ್ನು ಮುಂದುವ ರಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಲಾಗಿದೆ.