ಬೆಂಗಳೂರು (ಏ. 18): ಲೋಕಸಭಾ ಚುನಾವಣೆಯ ಮತದಾನದ ದಿನವಾದ ಗುರುವಾರವೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಈ ಮಳೆಯು ಭಾರಿ ಪ್ರಮಾಣದಲ್ಲಿ ಆಗುವುದಿಲ್ಲವಾದ ಕಾರಣ ಮತ ಚಲಾವಣೆಗೆ ಅಂತಹ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಆದರೆ, ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮತದಾರರು ಮಧ್ಯಾಹ್ನದ ನಂತರ ಅಥವಾ ಸಂಜೆ ಹೋಗಿ ಮತದಾನ ಮಾಡೋಣ ಎಂಬ ಆಲಸ್ಯಬಿಟ್ಟು ಮಧ್ಯಾಹ್ನಕ್ಕೂ ಮುನ್ನ ಮತಗಟ್ಟೆಗೆ ಹೋಗಿ ಮತದಾನ ಮಾಡಿದರೆ ಒಳ್ಳೆಯದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಿಜ್ಞಾನಿ ಪ್ರಭು ಹೇಳಿದ್ದಾರೆ.

ಗುರುವಾರ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಹವಾಮಾನ ಇಲಾಖೆ ಗುರುವಾರ ಮಳೆ ಆಗುವ ಮುನ್ಸೂಚನೆ ನೀಡಿದೆ. ಈ ಮುನ್ಸೂಚನೆ ಪ್ರಕಾರ ಬಹುತೇಕ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಮಳೆ ಆಗಲಿದೆ. ಅದು ಕೂಡ ಕೆಲವೇ ನಿಮಿಷಗಳ ಕಾಲ ಸಾಧಾರಣ ಮಳೆಯಾಗಲಿದೆ. ಹೀಗಾಗಿ ಮತದಾನಕ್ಕೆ ಯಾವುದೇ ತೊಂದರೆಯಾಗುವ ಸಾಧ್ಯತೆಯಿಲ್ಲ ಎಂದು ಅವರು ಹೇಳುತ್ತಾರೆ.

ಅದರಲ್ಲೂ ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವುದು ಸಂಜೆ ಮತ್ತು ರಾತ್ರಿ ವೇಳೆಯಲ್ಲಿ. ಚಂಡಮಾರುತ ಮತ್ತು ವಾಯುಭಾರ ಕುಸಿತ ಉಂಟಾದ ಸಂದರ್ಭದಲ್ಲಿ ಮಾತ್ರ ಹಗಲು ವೇಳೆಯಲ್ಲಿ ಮಳೆಯಾಗುತ್ತದೆ ಅಷ್ಟೇ. ಒಂದು ವೇಳೆ ಮಳೆಯಾದರೂ ಕೇವಲ 15ರಿಂದ 20 ನಿಮಿಷ ಮಾತ್ರ ಆಗಲಿದೆ. ಅದಕ್ಕಿಂತ ದೀರ್ಘಾವಧಿಯ ಮಳೆ ಆಗುವುದಿಲ್ಲ ಎಂಬುದು ಅವರ ಅಭಿಪ್ರಾಯ.

ಮಳೆ ಬರುವ ಮುನ್ಸೂಚನೆ ಸಿಕ್ಕರೆ ಸಾಕು ಜನರು ಮನೆಯಿಂದ ಹೊರಗೆ ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ಗುರುವಾರ ಸಂಜೆಯ ನಂತರ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನಕ್ಕೂ ಮುನ್ನವೇ ಮತದಾನ ಮಾಡುವುದು ಒಳ್ಳೆಯದು.

- ಶ್ರೀನಿವಾಸ್‌ ರೆಡ್ಡಿ, ನಿರ್ದೇಶಕ, ಕೆಎಸ್‌ಎನ್‌ಡಿಎಂಸಿ