ಬೆಂಗಳೂರು :  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಪಕ್ಷಬೇಧ ಮರೆತು ಸಂಪೂರ್ಣ ಬೆಂಬಲ ನೀಡುವುದಾಗಿ ಮಹಾತ್ಮಗಾಂಧಿ ಶಾಂತಿ-ಸೌಹಾರ್ದ ವೇದಿಕೆ ಸಂಸ್ಥಾಪಕ ರವಿಶಂಕರ್‌ ಶೆಟ್ಟಿಹೇಳಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಕೆಲಸ ಮಾಡಿದ್ದರು. ಹಲವಾರು ಮೇಲ್ಸೇತುವೆ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದರು. ಬೆಂಗಳೂರು ವರ್ತುಲ ರಸ್ತೆ ನಿರ್ಮಾಣಕ್ಕೆಂದು ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ರಸ್ತೆ ಕಾಮಗಾರಿ ಮುಗಿದ ಬಳಿಕ ಉಳಿದ ಜಮೀನನ್ನು ಡಿನೋಟಿಫೈ ಮಾಡಿ ರೈತರಿಗೆ ಮರಳಿಸಿದ್ದ ಹೆಗ್ಗಳಿಕೆ ದೇವೇಗೌಡರಿಗೆ ಸಲ್ಲುತ್ತದೆ. ಹೀಗೆ ರೈತ ಪರ ಕಾಳಜಿಯುಳ್ಳ ಅವರು, ದೇಶದ ಪ್ರಧಾನಿಯಾಗಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ವಶದಲ್ಲಿದ್ದ ಭೂಮಿಯನ್ನು ಸಾರ್ವಜನಿಕರ ಬಳಕೆಗಾಗಿ ಒದಗಿಸಿಕೊಟ್ಟಿದ್ದರು.

ನನ್ನ ರಾಜಕೀಯ ಜೀವನದಲ್ಲಿ 25ಕ್ಕೂ ಹೆಚ್ಚು ವರ್ಷ ದೇವೇಗೌಡರ ಒಡನಾಡಿಯಾಗಿದ್ದೆ. ಹೀಗಾಗಿ ದೇವೇಗೌಡರ ಜನಪರ ಕಾಳಜಿ, ಮುತ್ಸದ್ದಿತನವನ್ನು ಹತ್ತಿರದಿಂದ ಬಲ್ಲೆ. ಪ್ರಸ್ತುತ ಕಾಂಗ್ರೆಸ್‌ ಪಕ್ಷದಲ್ಲಿದ್ದು, ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಆಗಿದ್ದರೂ ಸಹ ಪಕ್ಷದ ಹೈಕಮಾಂಡ್‌ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಡಲು ಸೂಚಿಸಿರುವುದನ್ನು ಸ್ವಾಗತಿಸುತ್ತೇನೆ. ಅಲ್ಲದೇ ಚುನಾವಣೆಯಲ್ಲಿ ದೇವೇಗೌಡರ ಗೆಲುವಿಗೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ ಎಂದು ರವಿಶಂಕರ್‌ ಶೆಟ್ಟಿಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.