ನವದೆಹಲಿ[ಮೇ.06]: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವ ರಾಜ್‌ನಾಥ್‌ಸಿಂಗ್‌, ರಾಜ್ಯವರ್ದನ್‌ ಸಿಂಗ್‌ ರಾಥೋಡ್‌ ಸೇರಿದಂತೆ ಹಲವು ಗಣ್ಯರ ಭವಿಷ್ಯ ನಿರ್ಧರಿಸಲಿರುವ ಲೋಕಸಭೆಯ 5ನೇ ಹಂತದ ಚುನಾವಣೆ ಸೋಮವಾರ ನಡೆಯಲಿದೆ. ಈ ಹಂತದಲ್ಲಿ 7 ರಾಜ್ಯಗಳಲ್ಲಿ 51 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಒಟ್ಟಾರೆ 674 ಅಭ್ಯರ್ಥಿಗಳ ಹಣೆಬರಹವನ್ನು 9 ಕೋಟಿ ಮತದಾರರ ನಿರ್ಧರಿಸಲಿದ್ದಾರೆ.

ಎಲ್ಲೆಲ್ಲಿ ಮತದಾನ?

ಉತ್ತರ ಪ್ರದೇಶದ 14, ರಾಜಸ್ಥಾನದ 12, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶದ ತಲಾ 7, ಬಿಹಾರದ 5, ಜಾರ್ಖಂಡ್‌ನ 4, ಜಮ್ಮು-ಕಾಶ್ಮೀರದ 2 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನಕ್ಕೆ ಯಾವುದೇ ಅಡ್ಡಿ ಆತಂಕ ಎದುರಾಗದಂತೆ ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದ್ದು, 94 ಸಾವಿರ ಮತಗಟ್ಟೆಗಳು, ಭದ್ರತಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ 5 ಹಂತದ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವುದರೊಂದಿಗೆ, ದೇಶದ 543 ಲೋಕಸಭಾ ಕ್ಷೇತ್ರಗಳ ಪೈಕಿ 425 ಕ್ಷೇತ್ರಗಳ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಂತಾಗಲಿದೆ. ಉಳಿದ 118 ಕ್ಷೇತ್ರಗಳ ಚುನಾವಣೆಯು ಮೇ 12 ಹಾಗೂ 19ರಂದು ನಡೆಯಲಿದ್ದು, ಮೇ 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಈ 51 ಕ್ಷೇತ್ರಗಳ ಪೈಕಿ ಬಿಜೆಪಿ ಮಿತ್ರಕೂಟದ ಪಕ್ಷಗಳು 440 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು. ಕಾಂಗ್ರೆಸ್‌ ಎರಡು ಕ್ಷೇತ್ರಗಳಲ್ಲಿ ಮಾತ್ರ ಅದು ಸಹ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಪ್ರತಿನಿಧಿಸಿದ್ದ ಅಮೇಠಿ ಹಾಗೂ ರಾಯ್‌ಬರೇಲಿಯಲ್ಲಿ ಜಯಿಸಿತ್ತು. ಇನ್ನು ತೃಣಮೂಲ 7 ಕ್ಷೇತ್ರ ಸೇರಿದಂತೆ ಇತರ ಪ್ರತಿಪಕ್ಷಗಳು ಗೆಲವು ಪಡೆದಿದ್ದವು.