ನವದೆಹಲಿ[ಮೇ.05]: ಲೋಕಸಭೆ ಚುನಾವಣೆಯ 5ನೇ ಹಂತದ ಬಹಿರಂಗ ಪ್ರಚಾರಕ್ಕೆ ಶನಿವಾರ ತೆರೆಬಿದ್ದಿದ್ದು, ಸೋಮವಾರ ಮತದಾನ ನೆರವೇರಲಿದೆ. ಬಿಹಾರ, ಜಮ್ಮು- ಕಾಶ್ಮೀರ, ಉತ್ತರ ಪ್ರದೇಶ, ಜಾರ್ಖಂಡ್‌, ಮಧ್ಯ ಪ್ರದೇಶ, ರಾಜಸ್ಥಾನ ಪಶ್ಚಿಮ ಬಂಗಾಳ- ಈ ಏಳು 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ 674 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಪರ್ಧೆಗೆ 5ನೇ ಹಂತ ಸಾಕ್ಷಿಯಾಗಲಿದೆ. ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಜಯಂತ್‌ ಸಿನ್ಹಾ, ನಟ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಕಣದಲ್ಲಿರುವ ಇತರ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಕಣದಲ್ಲಿರುವ 674 ಅಭ್ಯರ್ಥಿಗಳ ಪೈಕಿ 184 ಅಭ್ಯರ್ಥಿಗಳು ಕೋಟ್ಯಧಿಪತಿಗಳೆನಿಸಿಕೊಂಡಿದ್ದಾರೆ. 126 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಪ್ರಮುಖ ಪಕ್ಷಗಳಾದ ಬಿಜೆಪಿಯ 48, ಕಾಂಗ್ರೆಸ್‌ನ 45, ಬಿಎಸ್‌ಪಿಯ 33, ಸಮಾಜವಾದಿ ಪಕ್ಷದ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.