ಹಾಸನ :  ಚುನಾವಣಾ ಅಕ್ರಮ ಆರೋಪದಡಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗವು ಸಚಿವ ಎಚ್‌.ಡಿ.ರೇವಣ್ಣ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಒತ್ತಾಯಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆಯಲ್ಲಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿರುವ ಚುನಾವಣಾ ಆಯೋಗ ಅಕ್ರಮ ಮತದಾನಕ್ಕೆ ಕುಮ್ಮಕ್ಕು ನೀಡಿರುವ ಸಚಿವ ಎಚ್‌.ಡಿ. ರೇವಣ್ಣ ವಿರುದ್ಧವೂ ದೂರು ದಾಖಲಿಸಬೇಕು ಎಂದರು. 

ಸಚಿವ ರೇವಣ್ಣ ಅವರು ಸೋಲಿನ ಭೀತಿಯಿಂದಾಗಿ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಕ್ರಮ ನಡೆದಿರುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಅಮಾನತು ಮಾಡಿದ್ದಾರೆ. ಮತಕೇಂದ್ರದಲ್ಲಿ ಅಧಿಕಾರಿಗಳು, ಪಕ್ಷದ ಏಜೆಂಟರ್‌ ಹಾಗೂ ಅಭ್ಯರ್ಥಿ ಹೊರತುಪಡಿಸಿ ಮತ್ತಾರೂ ಇರಬಾರದು. ಮತಕೇಂದ್ರದಲ್ಲಿ ಪತ್ನಿಗಾಗಿ 10 ನಿಮಿಷ ಒಳಗೆ ಇದ್ದೆ ಎಂದು ರೇವಣ್ಣ ಹೇಳಿದ್ದಾರೆ. ಇದು ನಿಯಮ ಉಲ್ಲಂಘನೆಯಾಗಿದೆ. ಅದನ್ನು ಅವರು ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದರು.

ಸಚಿವ ರೇವಣ್ಣ ಬರುವ ಮೊದಲೇ ಪತ್ನಿ ಭವಾನಿ ರೇವಣ್ಣ ಅವರು ಮತ ಚಲಾಯಿಸಿ ಹೊರ ಹೋಗಿದ್ದರು. ಆದರೂ ರೇವಣ್ಣ ಸುಳ್ಳು ಹೇಳುತ್ತಿದ್ದಾರೆ. ಅಕ್ರಮ ಮತದಾನ ನಡೆದಿರುವ ಸಂಶಯ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಏಜೆಂಟರು ದೂರು ದಾಖಲಿಸಿದ್ದಾರೆ. ಚುನಾವಣೆ ಮುಗಿದ ಆರು ದಿನಗಳ ನಂತರ ದೂರು ಸಲ್ಲಿಸಿರುವುದರಲ್ಲಿ ಯಾವ ತಪ್ಪಿದೆ ಎಂದು ಪ್ರಶ್ನಿಸಿದರು.

ಸಂಜೆ 5ರ ಬಳಿಕ ಜಿಲ್ಲೆಯ ಅನೇಕ ಮತಗಟ್ಟೆಗಳಲ್ಲಿ ದಿಢೀರ್‌ ಏರಿಕೆಯಾಗಿದೆ. ಹೊಳೆನರಸೀಪುರ ತಾಲೂಕಿನ ಸಿಂಗೇನಹಳ್ಳಿ ಗ್ರಾಮದ ಮತಗಟ್ಟೆಸಂಖ್ಯೆ 79ರಲ್ಲಿ 318 ಮತದಾರರಿದ್ದಾರೆ. ಆದರೆ 482 ಜನರು ಮತ ಚಲಾಯಿಸಿದ್ದಾರೆ. ಈ ರೀತಿಯ ಅಕ್ರಮಗಳು ಜಿಲ್ಲೆಯ ಅನೇಕ ಕಡೆ ನಡೆದಿದ್ದು ಇದರ ಸಮಗ್ರ ತನಿಖೆಯಾಗಬೇಕು ಎಂದರು.