ಗಾಂಧಿನಗರ[ಏ.23]: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದ್ದು, ಪ್ರಧಾನಿ ಮೋದಿ ಅಹಮದಾಬಾದ್ ನಲ್ಲಿ ತಮ್ಮ ಮತ ಚಲಾಯಿಸಿದ್ದಾಋಎ. ಗಾಂಧಿನಗರದಲ್ಲಿ ತನ್ನ ತಾಯಿಯನ್ನು ಭೇಟಿಯಾದ ಬಳಿಕ ಅಹಮದಾಬಾದ್ ನಲ್ಲಿರುವ ನಿಶಾನ್ ಶಾಲೆಯ ಮತಗಟ್ಟೆಗೆ ತೆರಳಿದ ಪ್ರಧಾನಿ ತಮ್ಮ ಮತ ಚಲಾಯಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೋದಿ ಮತದಾರರಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಭಯೋತ್ಪಾದನೆಯ ಶಕ್ತಿ IED ಆದರೆ, ಮತದಾರರ ಚೀಟಿ ಜನಸಾಮಾನ್ಯರ ಶಕ್ತಿ ಎಂದಿದ್ದಾರೆ.

"

ಮತದಾನದ ಮಹತ್ವ ವಿವರಿಸಿ ಮಾತನಾಡಿದ ಪ್ರಧಾನಿ ಮೋದಿ 'ಮತದಾರರ ಚೀಟಿ ಭಯೋತ್ಪಾದಕರ ಅಸ್ತ್ರವಾಗಿರುವ IEDಗಿಂತ ಹೆಚ್ಚು ಶಕ್ತಿಶಾಲಿ. ಅದರ ಮಹತ್ವ ಕೂಡಾ ಹೆಚ್ಚು. ಹೀಗಾಗಿ ಎಲ್ಲಾ ಮತದಾರರು ಅದರಲ್ಲೂ ಪ್ರಮುಖವಾಗಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ. ಈ ಶತಮಾನ ನಿಮ್ಮದು' ಎಂದಿದ್ದಾರೆ.

ಪ್ರಜಾಪ್ರಭುತ್ವದ ಮಹತ್ವ ಸಾರಿದ ಮೋದಿ 'ಇಂದು ನನಗೂ ನನ್ನ ಕರ್ತವ್ಯ ಪಾಲಿಸುವ ಅವಕಾಶ ಸಿಕ್ಕಿದೆ. ಪ್ರಜಾಪ್ರಭುತ್ವದ ಈ ಬಹುದೊಡ್ಡ ಉತ್ಸವದಲ್ಲಿ ಗುಜರಾತ್ ನಿಂದ ಭಾಗವಹಿಸುವ ಸಸುವರ್ಣಾವಕಾಶ ನನ್ನದಾಗಿದೆ. ಕುಂಭ ಮೇಳದಲ್ಲಿ ಸ್ನಾನ ಮಾಡಿ ಸಿಗುವಂತಹ ಆ ಪವಿತ್ರತೆಯ ಆನಂದ, ಇಂದು ಪ್ರಜಾಪ್ರಭುತ್ವದ ಪರ್ವದಲ್ಲಿ ಮತದಾನ ಮಾಡುವ ಮೂಲಕ ನನಗೆ ಸಿಕ್ಕಿದೆ. ಹೀಗಾಗಿ ಯಾವೆಲ್ಲಾ ಕ್ಷೇತ್ರಗಳಲ್ಲಿ ಇನ್ನು ಮತದಾನ ನಡೆಯಲಿದೆಯೋ ಅಲ್ಲೆಲ್ಲಾ ಜನ ಸಾಮಾನ್ಯರು ಅಧಿಕ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಆಗ್ರಹಿಸುತ್ತೇನೆ. ಇದೇ ಸಂದರ್ಭದಲ್ಲಿ ಮೊದಲ ಬಾರಿ ಮತ ಚಲಾಯಿಸುವ ಎಲ್ಲಾ ಯುವ ಮತದಾರರಿಗೆ ನನ್ನ ಶುಭಾಷಯಗಳು. ಈ ಶತಮಾನ ನಿಮ್ಮದು ಹೀಗಾಗಿ ನಿಮ್ಮ ಭವಿಷ್ಯ ಸದೃಢಗೊಳಿಸಲು ಮತ ಚಲಾಯಿಸಿ. ಶೇ. 100ರಷ್ಟು ಮತದಾನ ದಾಖಲಿಸಿ' ಎಂದಿದ್ದಾರೆ.