ಚಂಡೀಗಡ[ಮೇ.08]: ಬಾಲಿವುಡ್ ನಟ ಅನುಪಮ್ ಖೇರ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,  ಚಂಡೀಗಢದ ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಪರ ಮತ ಯಾಚಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಗಲ್ಲಿ ಗಲ್ಲಿಗೆ ತೆರಳಿ ಮತ ಯಾಚಿಸುತ್ತಿರುವ ಅನುಪಮ್ ಖೇರ್ ಗೆ ವಿಚಿತ್ರ ಸನ್ನಿವೇಶವೊಂದನ್ನು ಎದುರಿಸಬೇಕದ ಅನಿವಾರ್ಯತೆ ಎದುರಾಗಿದ್ದು, ಇದು ಅವರನ್ನು ಸಂಪೂರ್ಣವಾಗಿ ಸ್ಥಬ್ಧಗೊಳಿಸಿದೆ. ಸದಯ ಈ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಹೌದು ವಿಡಿಯೋದಲ್ಲಿ ಅನುಪಮ್ ಖೇರ್ ತನ್ನ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಪರ ಮತ ಯಾಚಿಸಲು ಅಂಗಡಿಯೊಂದನ್ನು ಪ್ರವೇಶಿಸುತ್ತಾರೆ. ನಟ ಪ್ರವೇಶಿಸುತ್ತಿದ್ದಂತೆಯೇ ಕ್ಲಾಸ್ ತೆಗೆದುಕೊಳ್ಳಲು ಸನ್ನದ್ಧರಾಗಿದ್ದ ಅಂಗಡಿ ವ್ಯಾಪಾರಿ 2014ರಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಕೈಯ್ಯಲ್ಲಿ ಹಿಡಿದು 'ಬಿಜೆಪಿ ತಾನು ಕೊಟ್ಟ ಭರವಸೆಗಳಲ್ಲಿ ಎಷ್ಟನ್ನು ಪೂರೈಸಿದೆ ಎಂದು ಹೇಳಬಹುದಾ? ಎಂದು ಪ್ರಶ್ನಿಸಿದ್ದಾರೆ?'. ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಅನುಪಮ್ ಖೇರ್ ಒಂದು ಮಾತನ್ನೂ ಅಡದೆ ವ್ಯಾಪಾರಿಗೆ ಕೈ ಮುಗಿದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಖುದ್ದು ಅನುಪಮ್ ಖೇರ್ ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಜೊತೆ ಸ್ಪಷ್ಟನೆ ನೀಡಿರುವ ಅನುಪಮ್ ಖೇರ್ ನಿನ್ನೆ ಕಿರಣ್ ಖೇರ್ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ, ವಿಪಕ್ಷಗಳು ತಮ್ಮ ಇಬ್ಬರು ವ್ಯಕ್ತಿಗಳನ್ನು ಅಂಗಡಿಯಲ್ಲಿ ನಿಲ್ಲಿಸಿದ್ದರು. ಅವರು ನನ್ನ ಬಳಿ ಬಿಜೆಪಿಯ 2014ರ ಪ್ರಣಾಳಿಕೆಯನ್ನು ತೋರಿಸಿ ಪ್ರಶ್ನಿಸಲು ಸನ್ನದ್ಧರಾಗಿದ್ದರು. ಅಂಗಡಿಯೊಳಗಿದ್ದ ಇಬ್ಬರಲ್ಲಿ ಓರ್ವ ವಿಡಿಯೋ ಚಿತ್ರೀಕರಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಹೀಗಾಘಿ ನಾನೂ ಏನನ್ನೂ ಉತ್ತರಿಸದೆ ಮುಂದೆ ಹೋದೆ ಎಂದಿದ್ದಾರೆ.

ಚಂಡೀಗಡದಲ್ಲಿ ಪತ್ನಿ ಪರ ಪ್ರಚಾರ ನಡೆಸುತ್ತಿರುವ ಅನುಪಮ್ ಖೇರ್ ಚಿತ್ರ ವಿಚಿತ್ರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಸೋಮವಾರದಂದು ಕುಡಾ ಅವರು ಇಂತಹುದೇ ಪರಿಸ್ಥಿತಿಯನ್ನೆದುರಿಸಿದ್ದರು.