ನವದೆಹಲಿ(ಏ.12): ಉತ್ತರಪ್ರದೇಶದ ಸುಲ್ತಾನ್​ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಮುಸ್ಲಿಂ ಬಾಹುಳ್ಯ ತುರಬ್ ಖಾನಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮನೇಕಾ ಗಾಂಧಿ, ‘ಮುಸ್ಲಿಮರು ನನಗೆ ಮತ ಹಾಕದಿದ್ದರೆ ಅವರಿಗೆ ನಾನು ಉದ್ಯೋಗ ಕೊಡಿಸುವುದಿಲ್ಲ’ ಎಂದು ತಾಕೀತು ಮಾಡಿದ್ದಾರೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೂ ಆಗಿರುವ ಮನೇಕಾ ಗಾಂಧಿ, ‘ಮುಸ್ಲಿಮರು ಕೊಟ್ಟು ತೆಗೆದುಕೊಳ್ಳುವ ವ್ಯವಹಾರವನ್ನು ಅರಿತುಕೊಳ್ಳಬೇಕಿದೆ. ವೋಟು ಹಾಕದೇ ಕೆಲಸ ಕೇಳಿದರೆ ಹೇಗೆ ಕೊಡಿಸಲು ಸಾಧ್ಯ..’ಎಂದು ಪ್ರಶ್ನಿಸಿದ್ದಾರೆ.

"

ಇದೇ ವೇಳೆ ಮುಸ್ಲಿಮರ ಮತವಿಲ್ಲದೇ ತಾವು ಗೆಲ್ಲಲು ಬಯಸುವುದಿಲ್ಲ ಎಂದಿರುವ ಮನೇಕಾ, ಮುಸ್ಲಿಮರು ತಮಗೆ ಮತ ಹಾಕದಿದ್ದರೆ ತಮಗೆ ನೋವಾಗುತ್ತದೆ ಎಂದು ಹೇಳಿದ್ದಾರೆ. 

ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿರುವ ಮನೇಕಾ, ತಮಗೆ ಜನರ ಅಗತ್ಯಕ್ಕಿಂತ ಹೆಚ್ಚಾಗಿ ಜನರಿಗೆ ತಮ್ಮ ಅಗತ್ಯ ಇದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.