ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯಿಂದ 350 ರು. ಹಣ ಕಡಿತಗೊಳಿಸಲಾಗುತ್ತದೆ ಎಂಬ ಸಂದೇಶ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯಾಸತ್ಯತೆ
ನವದೆಹಲಿ[ಮಾ.23]: ಒಂದು ವೇಳೆ ನೀವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯಿಂದ 350 ರು. ಹಣ ಕಡಿತಗೊಳಿಸಲಾಗುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಿನಪತ್ರಿಕೆಯೊಂದರ ತುಣುಕನ್ನು ಪೋಸ್ಟ್ ಮಾಡುತ್ತಿದ್ದು, ಅದರಲ್ಲಿ ಭಾರತ ಚುನಾವಣಾ ಆಯೋಗದ ವಕ್ತಾರರೊಬ್ಬರು ಹೀಗೆ ಹೇಳಿಕೆ ನೀಡಿದ್ದಾರೆಂದು ವರದಿಯಾಗಿದೆ.
ಈ ದಿನಪತ್ರಿಕೆಯ ಸ್ಕ್ರೀನ್‌ಶಾಟ್ ಫೇಸ್‌ಬುಕ್, ಟ್ವೀಟರ್‌ನಲ್ಲಿ ವೈರಲ್ ಆಗುತ್ತಿದೆ. ಆಲ್ಟ್ ನ್ಯೂಸ್ ಸುದ್ದಿ ಸಂಸ್ಥೆ ಇದರ ಸತ್ಯಾಸತ್ಯೆ ಪರೀಕ್ಷಿಸಿದಾಗ, ನವಭಾರತ ಟೈಮ್ಸ್ ಪತ್ರಿಕೆಯಲ್ಲಿ ವಿಡಂಬನಾತ್ಮಕ ಲೇಖನವೊಂದು ಪ್ರಕಟವಾಗಿತ್ತು. ಆ ಲೇಖನದ ಮೇಲ್ಭಾಗದಲ್ಲಿ, ‘ಈ ಸುದ್ದಿ ಸತ್ಯ ಅಲ್ಲ. ಇದೊಂದು ಜೋಕ್ ಆಗಿದ್ದು, ಯಾರನ್ನೂ ನೋಯಿಸುವ ಉದ್ದೇಶ ಇರುವುದಿಲ್ಲ’ ಎಂದು ಬರೆಯಲಾಗಿದೆ.
ಲೋಕ್‌ಮಾತಾ ಎಂಬ ಮರಾಠಿ ದಿನಪತ್ರಿಕೆಯೂ ಸಹ ಇದನ್ನು ಪ್ರಕಟಿಸಿ, ಇದೇ ರೀತಿ ವಿಶೇಷ ಸೂಚನೆ ನೀಡಿತ್ತು. ಸದ್ಯ ಇದೇ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ನಿಜಕ್ಕೂ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.
