ನವದೆಹಲಿ[ಮಾ.30]: ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ಭಾರತೀಯ ಚುನಾವಣಾ ಆಯೋಗದ ಪಿತೂರಿ ಬಯಲಾಗಿದೆ. ನಂಬರ್‌ ಪ್ಲೇಟ್‌ ಇಲ್ಲದ ಶಾಲಾ ವಾಹನ ಮತ್ತು 3 ಬೊಲೆರೋ ಜೀಪ್‌ಗಳಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌(ಇವಿಎಂ)ಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ ವಿಡಿಯೋ ಬಹಿರಂಗವಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ನೂರಾರು ಇವಿಎಂ ಮಷಿನ್‌ಗಳು ಬಸ್‌ಗಳಲ್ಲಿ ತುಂಬಿರುವ ದೃಶ್ಯವಿದೆ. ಈ ವಿಡಿಯೋ ಬಾರಿ ವೈರಲ್‌ ಆಗುತ್ತಿದೆ.

ಸ್ಟ್ರಾಂಗ್‌ ರೂಮ್‌ನಲ್ಲಿ ಇವಿಎಂ ಇಡುವ ಮುಂಚೆ ಮೋದಿ, ಶಾ ಮತ್ತು ಚುನಾವಣಾ ಆಯೋಗದ ನಡುವೆ ಪಿತೂರಿ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ ಈ ವಿಡಿಯೋ ಈ ಬಾರಿಯ ಲೋಕಸಭಾ ಚುನಾವಣೆಯದ್ದೇ ಎಂದು ಆಲ್ಟನ್ಯೂಸ್‌ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ಇದು ಹಳೆಯ ವಿಡಿಯೋ ಎಂದು ತಿಳಿದುಬಂದಿದೆ. 2018ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿತ್ತು.

ಬಿಜೆಪಿ ಈ ಇವಿಎಂಗಳನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿತ್ತು. ಆಗ ಮಧ್ಯಪ್ರದೇಶ ಚುನಾವಣಾ ಆಯೋಗ ಸ್ಪಷ್ಟನೆಯನ್ನೂ ನೀಡಿತ್ತು. ಸದ್ಯ ಅದೇ ವಿಡಿಯೋವನ್ನು 2019ರ ಲೋಕ ಚುನಾವಣೆ ವೇಳೆ ಸುಳ್ಳು ಸುದ್ದಿ ಹಬ್ಬಿಸಲು ಬಳಸಿಕೊಳ್ಳಲಾಗುತ್ತಿದೆ.