2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸೋತರೆ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿಯ ವಾಸ್ತವಾಂಶ

ನವದೆಹಲಿ[ಏ.27]: 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸೋತರೆ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಬಿಪಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದಂತಿರುವ ಸ್ಕ್ರೀನ್‌ಶಾಟ್‌ ಚಿತ್ರವೊಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ಪತ್ರಕರ್ತ ಮತ್ತು ಸಿನಿಮಾ ನಿರ್ಮಾಪಕ ಅವಿನಾಶ್‌ ದಾಸ್‌ ಕೂಡ ಇದನ್ನು ಪೋಸ್ಟ್‌ ಮಾಡಿದ್ದರು.

Scroll to load tweet…

ನಿಜಕ್ಕೂ ಸ್ಮೃತಿ ಇರಾನಿ ಹೀಗೆ ಹೇಳಿದ್ದರೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳುಸುದ್ದಿ ಎಂದು ಸ್ಪಷ್ಟವಾಗಿದೆ. ಆಲ್ಟ್‌ನ್ಯೂಸ್‌ ಸುದ್ದಿ ಸಂಸ್ಥೆಯು ಈ ಹೇಳಿಕೆಗೆ ಸಂಬಂಧಿಸಿದ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲಿಸಿದಾಗ ಈ ಕುರಿತ ಯಾವುದೇ ಫಲಿತಾಂಶವೂ ಲಭ್ಯವಾಗಿಲ್ಲ. ಅದರ ಬದಲಾಗಿ ‘ಪ್ರಧಾನ ಸೇವಕ್‌ ನರೇಂದ್ರ ಮೋದಿ ಅವರು ರಾಜಕೀಯ ನಿವೃತ್ತಿ ಪಡೆದ ದಿನದಂದೇ ತಾನೂ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು.

Scroll to load tweet…

ಅಲ್ಲದೆ ಆಲ್ಟ್‌ನ್ಯೂಸ್‌ ಎಬಿಪಿ ಸುದ್ದಿಸಂಸ್ಥೆಯ ಹಿರಿಯ ಸಂಪಾದಕ ಪಂಕಜ್‌ ಝಾ ಅವರನ್ನು ಸಂಪರ್ಕಿಸಿದ್ದು ಅವರು, ‘ಯಾವುದೋ ಸುದ್ದಿಯ ಸ್ಕ್ರೀನ್‌ಶಾಟನ್ನು ತಿರುಚಿ ಹೀಗೆ ಸುಳ್ಳುಸುದ್ದಿ ಹರಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಎಬಿಪಿ ಸ್ಕ್ರೀನ್‌ಶಾಟ್‌ನಲ್ಲಿರುವ ಪತ್ರಿಕಾಗೋಷ್ಠಿ ಯಾವುದೆಂದು ಆಲ್ಟ್‌ನ್ಯೂಸ್‌ ಪತ್ತೆ ಹಚ್ಚಿದ್ದು, ಅದರಲ್ಲಿ ಸ್ಮೃತಿ ಇರಾನಿ ಅವರು ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್‌ ವಾದ್ರಾ ಭೂ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಪತ್ರಕರ್ತರೆದುರು ಆರೋಪಿಸಿದ್ದಾರೆ. ಈ ಸುದ್ದಿ ಪ್ರಸಾದ ವೇಳೆ ಸ್ಕ್ರೀನ್‌ಶಾಟ್‌ ತೆಗೆದು ತಿರುಚಿ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಲಾಗುತ್ತಿದೆ.