ಬೆಂಗಳೂರು[ಮಾ.13]: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ನೀತಿ ಸಂಹಿತೆಯೂ ಜಾರಿಗೊಂಡಿದೆ. ಚುನಾವಣಾ ಆಯೋಗವು ದಿನಾಂಕ ಘೋಷಣೆ ಸಂದರ್ಭದಲ್ಲೇ ಸೈನಿಕರು ಉಗ್ರರ ಮೇಲೆ ನಡೆಸಿದ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದೆಂದು ಸೂಚನೆಯನ್ನೂ ನೀಡಿದೆ. ಹೀಗಿರುವಾಗಲೇ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರೊಂದನ್ನು ನೀಡಿದೆ.

ನಮೋ ಸುನಾಮಿ ಹಾಗೂ ಚಕ್ರವರ್ತಿ ಸೂಲಿಬೆಲೆ ಫೇಸ್ ಬುಕ್ ಖಾತೆಗಳ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸೂಲಿಬೆಲೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಭಾರತೀಯ ಸೇನೆ ಹಾಗೂ ಏರ್ ಸ್ಟ್ರೈಕ್ ವಿಚಾರವನ್ನು ಮತಗಳಿಗಾಗಿ ದುರುಪಯೋಗ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣಾ ಆಯೋಗದ ಸೂಚನೆಯನ್ನು ಉಲ್ಲಂಘಿಸಿದ್ದಾರೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ. 

ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ನಟರಾಜಗೌಡ, ಕಾನೂನು ಘಟಕದ ಉಪಾಧ್ಯಕ್ಷ ಅಹಮದ್,ಪ್ರಧಾನ ಕಾರ್ಯದರ್ಶಿ ಮುಕುಂದರಾಜ್ ಆಯೋಗಕ್ಕೆ ದೂರು ಸಲ್ಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.