ನಿಜವಾಯ್ತು ಓಮರ್ ಅಬ್ದುಲ್ಲಾ ನುಡಿದ ಭವಿಷ್ಯ| 2019ರ ಚುನಾವಣೆ ಮರೆತು, 2024ರ ಚುನಾವಣೆಗೆ ತಯಾರಿ ನಡೆಸಿ: ವಿಪಕ್ಷಗಳಿಗೆ 2 ವರ್ಷದ ಹಿಂದೆ ಸಲಹೆ ನೀಡಿದ್ದ ಮಾಜಿ ಮುಖ್ಯಮಂತ್ರಿ!
ನವದೆಹಲಿ[ಮೇ.23]: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ 2019ರಲ್ಲಿ NDAಗೆ ಸಿಕ್ಕ ಭರ್ಜರಿ ಮುನ್ನಡೆ ಬಳಿಕ ಟ್ವೀಟ್ ಒಂದನ್ನು ಮಾಡಿದ್ದಾರೆ. NDA ಸಾಧಿಸಿರುವ ಅದ್ಭುತ ಮುನ್ನಡೆಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಶುಭ ಕೋರಿರುವ ಓಮರ್ ಅಬ್ದುಲ್ಲಾ, ಈ ಗೆಲುವಿಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕಾರಣ ಎಂದಿದ್ದಾರೆ. ಹೀಗಿರುವಾಗ ಓಮರ್ ಅಬ್ದುಲ್ಲಾ 2017ರ ವಿಧಾನಸಭಾ ಚುನಾವಣೆ ವೇಳೆ ಮಾಡಿದ್ದ ಟ್ವೀಟ್ ಒಂದನ್ನು ನೆನಪಿಸಿಕೊಳ್ಳಲೇಬೇಕು. ಅಂದು ಅವರು ನುಡಿದಿದ್ದ ಭವಿಷ್ಯ ಇಂದು ಅಕ್ಷರಶಃ ನಿಜವಾಗಿದೆ.
2017ರಲ್ಲಿ ನಡೆದ ವಿಧಾನಸಭಾ ಚುನಾವಣೆ ಬಳಿಕ ಟ್ವೀಟ್ ಒಂದನ್ನು ಮಾಡಿದ್ದ ಓಮರ್ ಅಬ್ದುಲ್ಲಾ 2019ರ ಲೋಕಸಭಾ ಚುನಾವಣೆಯನ್ನು ಮರೆತು 2024ರ ಚುನಾವಣೆಗೆ ಸಿದ್ಧತೆ ನಡೆಸಿ ಎಂದು ವಿಪಕ್ಷಗಳಿಗೆ ಸಲಹೆ ನೀಡಿದ್ದರು. ಅಂದು ಅವರು ನುಡಿದಿದ್ದ ಭವಿಷ್ಯ ಇಂದಿನ ಫಲಿತಾಂಶದ ಬಳಿಕ ನಿಜವಾಗಿದೆ.
ಮೇ 19ರಂದು ಬಂದಿದ್ದ ಮತಗಟ್ಟೆ ಸಮೀಕ್ಷೆಯಲ್ಲಿ NDA ಗೆಲುವು ಸಾಧಿಸುತ್ತದೆ ಎಂದು ಹೇಳಲಾಗಿತ್ತು, ಆದರೀಗ ಎಕ್ಸಿಟ್ ಪೋಲ್ ಹಾಗೂ ಚುನಾವಣಾ ಫಲಿತಾಂಶದ ಬಳಿಕ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಓಮರ್ ಅಬ್ದುಲ್ಲಾ 'ಚುನಾವಣಾ ಸಮೀಕ್ಷೆ ಸರಿಯಾಗಿದೆ ಎಂಬುವುದು ಫಲಿತಾಂಶದಿಂದ ಸಾಬೀತಾಗಿದೆ. ಈ ಅದ್ಭುತ ಗೆಲುವಿಗಾಗಿ ಬಿಜೆಪಿ ಹಾಗೂ NDAಗೆ ಅಭಿನಂದನೆಗಳು. ಈ ಗೆಲುವಿನ ಶ್ರೇಯಸ್ಸು ಕೇವಲ ಮೋದಿ ಹಾಗೂ ಅಮಿತ್ ಶಾಗೆ ಸಲ್ಲಬೇಕು. ಬಿಜೆಪಿ ಅತ್ಯಂತ ಸಂಯಮದಿಂದ ತನ್ನ ಪ್ರಚಾರ ನಡೆಸಿದೆ' ಎಂದಿದ್ದಾರೆ.
ಪಂಜಾಬ್, ಗೋವಾ ಹಾಗೂ ಮಣಿಪುರ ಚುನಾವಣಾ ಫಲಿತಾಂಶ ಗಮನಿಸಿದರೆ ಈ ರಾಜ್ಯಗಳಲ್ಲೂ ಬಿಜೆಪಿಯನ್ನು ಸೋಲಿಸಬಹುದು ಎಂಬ ಸಂದೇಶ ಸಿಗುತ್ತದೆ. ಆದರೆ ಇದಕ್ಕೆ ಕೇವಲ ಯೋಜನೆಗಳಲ್ಲ, ರಣತಂತ್ರದ ಅಗತ್ಯವಿದೆ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
