ಸದಾನಂದಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದ ಶೋಭಾ ಕರಂದ್ಲಾಜೆ ಅವರು ಸ್ಥಳೀಯ ಸಂಸದ ಡಿ.ವಿ. ಸದಾನಂದಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ಬೆಂಗಳೂರು (ಮಾ.14): ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ವಿ. ಸದಾನಂದಗೌಡ ಅವರಿಗೆ ಟಿಕೆಟ್ ತಪ್ಪಿದ್ದು, ಈ ಕ್ಷೇತ್ರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸಂಸದ ಹಾಗೂ ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವುದಕ್ಕೆ ಮುಂದಾಗಿರುವ ಶೋಭಾ ಕರಂದ್ಲಾಜೆ ಅವರು, ಡಿ.ವಿ. ಸದಾನಂದಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಪಡೆದ ಸಚಿವೆ ಶೋಭಾ ಕರಂದ್ಲಾಜೆ ಅವರು ಸಂಸದ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿ ಮಾಡಿದ್ದಾರೆ. ಗುರುವಾರ ಬೆಳ್ಳಂಬೆಳಿಗ್ಗೆ ಸದಾನಂದ ಗೌಡರನ್ನು ಭೇಟಿ ಮಾಡಿದ ಶೋಭಾ ಕರಂದ್ಲಾಜೆ ಅವರು, ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದು ಸದಾನಂದಗೌಡ ಅವರು ಭರವಸೆ ನೀಡಿದ್ದಾರೆ. ಜೊತೆಗೆ, ಪಕ್ಷದ ಆದೇಶ ಪಾಲನೆ ಮಾಡುವುದಾಗಿಯೂ ಶೋಭಾ ಕರಂದ್ಲಾಜೆ ಅವರಿಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಟಿಕೆಟ್ ಕೈ ತಪ್ಪಿದವರ ಕೋಲಾಹಲ; ಮುನಿಸು ಕೈಬಿಟ್ಟ ಸಿಂಹ, ಸಿಡಿದೇಳುತ್ತಾರಾ ಈಶ್ವರಪ್ಪ!
ನಂತರ, ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ದೆಹಲಿ ನಾಯಕರ ಮೇಲೆ ನನಗೆ ವಿಶ್ವಾಸ ಇತ್ತು. ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರು ಜವಾಬ್ದಾರಿ ವಹಿಸಿದ್ದರು. ಪಕ್ಷ, ಸರ್ಜಾರದ್ದು ಶ್ರಮ ವಹಿಸಿ ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ನಾಯಕರ ತೀರ್ಮಾನಕ್ಕೆ ನಾನು ಬದ್ದವಾಗಿದ್ದೇನೆ. ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿ ಕೆಲಸ ಆಗಿದೆ. ಕೆಲವರು ಅದನ್ನ ವಿರೋಧಿಸಿದ್ದಾರೆ. ಕೆಲವರು ಪ್ರಾಯೋಜಿತ ಮಾಡಿ ವಿರೋಧ ಮಾಡಿದ್ದರು. ಅವರೂ ಕೂಡ ಟಿಕೆಟ್ ಪಡೆಯುವಲ್ಲಿ ವಿಫಲ ಆಗಿದ್ದಾರೆ. ವಿರೋಧ ಮಾಡುವವರಿಗೆ ಟಿಕೆಟ್ ಸಿಗಲ್ಲ. ಇನ್ನಾದ್ರೂ ವಿರೋಧ ಮಾಡೋರು ಪಾಠ ಕಲಿಯಬೇಕು. ಪಕ್ಷಕ್ಕೆ ವಿರೋಧ ಮಾಡೋರಿಗೆ ಮಣೆ ಹಾಕಲ್ಲ ಅಂತ ಹೈಕಮಾಂಡ್ ತಿಳಿಸಿದೆ ಎಂದು ಪರೋಕ್ಷವಾಗಿ ಸಿ.ಟಿ. ರವಿ ಅವರಿಗೆ ಟಾಂಗ್ ನೀಡಿದರು.
ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ, ಸಚಿವೆ ಆಗಿ ಕೆಲಸ ಮಾಡಿದ್ದೇನೆ. ನಂತರ, ಯಶವಂತಪುರದಲ್ಲಿ ಸೋಮಶೇಖರ್ ಗೆಲ್ಲಿಸಿದ್ದೆವು. ಅವರು ಮೋಸ ಮಾಡಿದ್ದಾರೆ. ಎಲ್ಲರ ಆಶಿರ್ವಾದ ನನಗಿದೆ. ಬೆಂಗಳೂರು ಉತ್ತರದಲ್ಲಿಯೂ ವಿರೋಧ ವ್ಯಕ್ತವಾಗಿದೆ. ಜೊತೆಗೆ, ನೆಲಮಂಗಲದವರೂ ವಿರೋಧ ಮಾಡಿದ್ದಾರೆ. ಅವರಿಗೂ ಬೆಂಗಳೂರು ಉತ್ತರಕ್ಕೂ ಏನು ಸಂಬಂಧ. ಸಹಜವಾಗಿ ಉಡುಪಿ-ಚಿಕ್ಕಮಗಳೂರಿಗೆ ಕನೆಕ್ಟ್ ಆಗಿದ್ದೆ. ಸಹಜವಾಗಿ ಮಿಸ್ ಆಗಿದೆ ಎಂದು ಹೇಳಿದರು.
ಲೋಕಸಭಾ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ ಸಂಸದ ಡಿ.ವಿ. ಸದಾನಂದಗೌಡ!
ನನಗೆ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಉಡುಪಿಯವರು ಕಾರಣ ಅಂತ ಹೇಳಲ್ಲ. ನನ್ನನ್ನ ಬೆಂಗಳೂರಿಗೆ ತರಬೇಕು ಅನ್ನೋದು ಹೈಕಮಾಂಡ್ ನಿರ್ಧಾರ ಆಗಿರಬಹುದು. ಆದ್ರೂ ನಾನು ಅಲ್ಲಿ ಗೆಲ್ತಿದ್ದೆ. ಕಳೆದ ಬಾರಿ ಕೂಡ ಗೋ ಬ್ಯಾಕ್ ಕೂಗಿದ್ದರು. ಆದ್ರೂ 3 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೆನು. ಈ ಬಾರಿಯೂ ಬೆಂಗಳೂರಿನಲ್ಲಿ ಉತ್ತಮ ಅಂತರದಿಂದ ಗೆಲ್ಲುತ್ತೇನೆ. ಉಡುಪಿ ಚಿಕ್ಕಮಗಳೂರಿನಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಕೂಡ ಅಭೂತಪೂರ್ವವಾಗಿ ಗೆಲ್ಲುತ್ತಾರೆ ಎಂದು ಹೇಳಿದರು.