ಬೆಂಗಳೂರು :  ಕಾಂಗ್ರೆಸ್ಸಿನ ಸೋಲರಿಯದ ಸರದಾರ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ಸಿನ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಲಿನ ರುಚಿ ತೋರಿಸಿರುವ ಬಿಜೆಪಿಯ ಡಾ.ಉಮೇಶ್ ಜಾಧವ್ ಅವರಿಗೆ ಕೇಂದ್ರದ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ. 

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಬಂದಿದ್ದ ಜಾಧವ್ ಅವರು ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಖರ್ಗೆ ವಿರುದ್ಧ ಸಮರ ನಡೆಸಿ ಗೆದ್ದಿದ್ದಾರೆ. ವೃತ್ತಿಯಿಂದ ವೈದ್ಯರಾಗಿ ರುವ ಜಾಧವ್‌ರನ್ನು ಖರ್ಗೆ ವಿರುದ್ಧ ಕಣಕ್ಕಿಳಿಸಬೇಕೆಂಬ ನಿರ್ಧಾರ ಕೈಗೊಂಡಿದ್ದು ಕಳೆದ ಆಗಸ್ಟ್-ಸಪ್ಟೆಂಬರ್ ತಿಂಗಳಲ್ಲಿ. ಆ ವೇಳೆ ನಡೆದ ಮಾತುಕತೆಯಲ್ಲಿ ಖರ್ಗೆ ವಿರುದ್ಧ ಜಯಗಳಿಸಿದಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ನೀಡಲಾಗಿತ್ತೆಂಬ ಮಾಹಿತಿ ಗೊತ್ತಾಗಿದೆ.

 ಜೊತೆಗೆ ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಸ್ಥಳೀಯ ಬಿಜೆಪಿ ನಾಯಕರು ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹೀಗಾಗಿ, ಇದೀಗ ಗೆಲುವು ಸಾಧಿಸಿದ ಜಾಧವ್‌ರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ.ವರ್ಗದ ಲಂಬಾಣಿ ಜನಾಂಗಕ್ಕೆ ಸೇರಿದ ಅವರಿಗೆ ಹೈದ್ರಾಬಾದ್ ಕರ್ನಾಟಕದಿಂದ ಪ್ರಾತಿನಿಧ್ಯ ನೀಡಬಹುದು ಎನ್ನಲಾಗುತ್ತಿದೆ.