ಉಡುಪಿ[ಮಾ.20]: ತಮ್ಮ ಭಾಷಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವಂತೆ ಮಾತನಾಡಿದ್ದಾರೆ, ಈ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆಂಬ ಆರೊಪದಡಿಯಲ್ಲಿ ಚಿಂತಕ ದಿನೇಶ್ ಅಮೀನ್ ಮಟ್ಟು ಸಹಿತ ಐವರ ಮೇಲೆ ಕೇಸು ದಾಖಲಾಗಿದೆ. 

ಭಾನುವಾರದಂದು ಉಡುಪಿಯಲ್ಲಿ ನಡೆದಿದ್ದ ಸರ್ವಜನೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿದ್ದ ಪ್ರಗತಿಪರ ಚಿಂತಕರಾದ ಅಮೀನ್ ಮಟ್ಟು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವಂತೆ ಮಾತನಾಡಿದ್ದಾರೆ. ಈ ಮೂಲಕ ಒಂದು ವರ್ಗದ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ. ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಕೇಸು ದಾಖಲಿಸಿದೆ. 

ಐದು ಮಂದಿಯ ಮೇಲೆ ಪ್ರಕರಣ ದಾಖಲು

ದಿನೇಶ್ ಅಮೀನ್ ಮಟ್ಟು, ಮಹೇಂದ್ರ ಕುಮಾರ್, ಇಂದೂಧರ ಹೊನ್ನಾಪುರ, ಜಿಎನ್ ನಾಗರಾಜ್ ಹಾಗೂ ಕಾರ್ಯಕ್ರಮ ಆಯೋಜಕ  ಅಮೃತ್ ಶೆಣೈ ಮೇಲೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಪ್ರಕರಣ ದಾಖಲಿಸಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಮೃತ್ ಶೆಣೈ ಈ ಸಮಾವೇಶ ಆಯೋಜಿಸಿದ್ದರೆನ್ನಲಾಗಿದೆ.