ತೇಜಸ್ವಿ ಮೀಟೂ ಕೇಸ್ ಬಗ್ಗೆ ಏಕೆ ಮಾಹಿತಿ ನೀಡಿಲ್ಲ?| ಸೋಮ್ ದತ್ತ ಎಂಬ ಮಹಿಳೆ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ್ದಾರೆ| ಚು.ಆಯೋಗಕ್ಕೆ ಅದರ ಮಾಹಿತಿ ಏಕೆ ನೀಡಿಲ್ಲ: ಬ್ರಿಜೇಶ್ ಕಾಳಪ್ಪ ಪ್ರಶ್ನೆ| ನನ್ನ ಖಾಸಗಿ ವಿಷಯಕ್ಕೆ ಕೈಹಾಕಬೇಡಿ: ಕಾಳಪ್ಪಗೆ ಸೋಮ್ ದತ್ತ ಎಚ್ಚರಿಕೆ
ಬೆಂಗಳೂರು[ಏ.15]: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕೋಲ್ಕತಾ ಮೂಲದ ಮಹಿಳೆ ಸೋಮ… ದತ್ತ ಮಾಡಿರುವ ಲೈಂಗಿಕ ಕಿರುಕುಳ (ಮೀಟೂ) ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೂ ತೇಜಸ್ವಿ ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ ಅದನ್ನು ನಮೂದಿಸಿಲ್ಲ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪ ಮಾಡಿದ್ದಾರೆ.
ಇದರ ಬೆನ್ನಲ್ಲೇ ಬ್ರಿಜೇಶ್ ಕಾಳಪ್ಪ ಅವರ ವಿರುದ್ಧ ಹರಿಹಾಯ್ದಿರುವ ಸೋಮ್ ದತ್ತ, ನನ್ನ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಲು ಹಾಗೂ ಯಾವುದೇ ಪಕ್ಷ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ನಾನು ಅನುಮತಿ ಕೊಟ್ಟಿಲ್ಲ. ಒಬ್ಬ ಮಹಿಳೆಯ ಘನತೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವ ಬ್ರಿಜೇಶ್ ಕಾಳಪ್ಪ ಅವರಿಗೆ ನಾಚಿಕೆಯಾಗಬೇಕು. ನನ್ನ ಮೂಲಭೂತ ಹಕ್ಕಾಗಿರುವ ಖಾಸಗಿತನದ ಮೇಲಿನ ಆಕ್ರಮಣ ಹಾಗೂ ನನ್ನ ಖಾಸಗಿ ಮತ್ತು ಗೌಪ್ಯ ಮಾಹಿತಿಯನ್ನು ಅನುಮತಿ ಇಲ್ಲದೆ ಬಹಿರಂಗಪಡಿಸಿರುವ ಬಗ್ಗೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಟ್ವೀಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ ಅವರು, ಇತ್ತೀಚೆಗೆ ಆಡಿಯೋ ಸಿ.ಡಿ. ಒಂದು ಬಿಡುಗಡೆಯಾಗಿದೆ. ಅದರಲ್ಲಿ ಸೋಮ್ ದತ್ತ ಅವರು ತಾನು ಸೇರಿದಂತೆ ಮೂವರು ಮಹಿಳೆಯರ ಮೇಲೆ ತೇಜಸ್ವಿ ಸೂರ್ಯ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ, ಈ ವಿಷಯವನ್ನು ತೇಜಸ್ವಿ ಪ್ರಮಾಣಪತ್ರದಲ್ಲಿ ಬಹಿರಂಗಪಡಿಸಿಲ್ಲ. ಈ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರಿಗೆ ಮಾಹಿತಿ ಇದ್ದರೂ ಬಿಜೆಪಿ ಮೌನ ವಹಿಸಿದೆ ಎಂದು ಆರೋಪಿಸಿದ್ದರು. ಅಲ್ಲದೆ, ತೇಜಸ್ವಿ ಸೂರ್ಯ ತಮ್ಮ ಪ್ರಭಾವ ಬಳಸಿ ತಮ್ಮ ವಿರುದ್ಧದ ಲೈಂಗಿಕ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಸೋಮ್ ದತ್ತ ಅವರಿಗೆ ಹೆದರಿಸುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.
ಈ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿರುವ ಸೋಮ್‌ದತ್ತ, ನನ್ನ ವಿಚಾರದಲ್ಲಿ ಯಾರ ಮಧ್ಯಪ್ರವೇಶಕ್ಕೂ ನಾನು ಅವಕಾಶ ನೀಡಿಲ್ಲ. ಅನಗತ್ಯ ಮಧ್ಯಪ್ರವೇಶ ಮಾಡಿರುವವರು ಬೇಷರತ್ ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತೇನೆ. ಮಹಿಳಾ ಆಯೋಗಕ್ಕೆ ಈಗಾಗಲೇ ಪತ್ರ ಬರೆದಿದ್ದೇನೆ. ಇದರಲ್ಲಿ ನಾನು ಭಾಗಿಯಾಗಿಲ್ಲ. ನನ್ನ ಪರವಾಗಿ ದಾಖಲಿಸಿರುವ ದೂರು ನನ್ನ ಗಮನಕ್ಕೆ ತರದೆ ನೀಡಿದ್ದಾರೆ. ಮಾಧ್ಯಮಗಳಲ್ಲಿರುವ ಎಲ್ಲಾ ಸ್ನೇಹಿತರನ್ನೂ ಇದನ್ನು ಸುದ್ದಿ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕ್ರಮಕ್ಕೆ ಸ್ವಾಗತ- ಬ್ರಿಜೇಶ್:
ನಾನು ಮಹಿಳೆಯ ಘನತೆಗೆ ಚ್ಯುತಿ ತರುವಂತೆ ಮಾತನಾಡಿಲ್ಲ. ನೀವು ಕಾನೂನು ಕ್ರಮಕ್ಕೆ ಮುಂದಾದರೆ ನಾನು ಸ್ವಾಗತಿಸುತ್ತೇನೆ. ಮಾತುಕತೆ ನಡೆದಿರುವುದನ್ನು ಒಪ್ಪಿಕೊಂಡು ನೀವು ಮಾಡಿರುವ ಟ್ವೀಟ್ ಡಿಲೀಟ್ ಮಾಡಿದ್ದೀರಿ. ಅದರ ಬಗ್ಗೆ ಚಿಂತಿಸಬೇಡಿ, ಟ್ವೀಟ್‌ನ ಅರ್ಧ ಡಜನ್ ಸ್ಕ್ರೀನ್‌ಶಾಟ್ ಈಗಾಗಲೇ ತೆಗೆದುಕೊಂಡಿರಲಾಗಿರುತ್ತದೆ ಎಂದು ಮಾರುತ್ತರ ನೀಡಿದ್ದಾರೆ.
