ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸುಮಲತಾ ಬೆಂಬಲಿಗರ ನಡುವೆ ವಾರ್ ಮುಂದುವರಿದಿದೆ. 

ಮಂಡ್ಯ : ಚುನಾವಣಾಧಿಕಾರಿ ಎನ್. ಮಂಜುಶ್ರೀ ಅವರಿಗೆ ಮನವಿ ಸಲ್ಲಿಸಿದ್ದೆವು. ಆದರೆ ಅವರು ನೀಡಿದ ಮೂರು ಉತ್ತರಗಳು ನಮಗೆ ಶಾಕ್ ನೀಡಿದ್ದಲ್ಲದೆ ಚೇತರಿಸಿಕೊಳ್ಳುವುದೇ ಕಷ್ಟವಾಯಿತು ಸುಮಲತಾ ಅಂಬರೀಶ್ ಅವರ ಚುನಾವಣಾ ಏಜೆಂಟ್ ಮದನ್ ತಿಳಿಸಿದ್ದಾರೆ. 

ನಗರದದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಖಿಲ್ ನಾಮಪತ್ರದಲ್ಲಿ ಮಾಹಿತಿಗಳ ಕೊರತೆ ಇರುವುದರಿಂದ ಅದನ್ನು ತಿರಸ್ಕರಿಸುವಂತೆ ಕೋರಿ ಅರ್ಜಿಸಲ್ಲಿಸಿದ್ದು ಮತ್ತು ಸಂಪೂರ್ಣ ವಿಡಿಯೋ ಬೇಕು ಎಂದು ಕೇಳಿದಾಗ ಜಿಲ್ಲಾ ಚುನಾವಣಾ ಅಧಿಕಾರಿಗಳು ನೀಡಿದ ಉತ್ತರ ಆಘಾತಕಾರಿಯಾಗಿತ್ತು ಎಂದರು.

ಮೊದಲನೇ ಶಾಕ್: ಮಾ.27 ರಂದು ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರದ ಅಫಿಡವಿಟ್‌ನ ಫಾರಂ 26 ರಲ್ಲಿ ಕೆಲವು ನ್ಯೂನತೆಗಳು ಇವೆ. ಹೀಗಾಗಿ ನಾಮಪತ್ರ ತಿರಸ್ಕರಿಸುವಂತೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿದ್ದೆ. ಚುನಾವಣಾಧಿಕಾರಿ ನಾಮಪತ್ರವನ್ನು ಸಿಂಧುಗೊಳಿಸಿದರು. ಬಳಿಕ ನೀವು ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಸಿಲ್ಲ. ಸಿಂಧುಗೊಳಿಸಿದ ಮೇಲೆ ಆಕ್ಷೇಪಣೆ ಸಲ್ಲಿಸಲಾಗಿದೆ ಎಂಬ ಉತ್ತರ ಬಂತು.

ಎರಡನೇ ಶಾಕ್: ನಾಮಪತ್ರ ಪರಿಶೀಲನೆ ಮಾಡಿದ ದಿನ ಸಂಪೂರ್ಣ ವಿಡಿಯೋ ಕೊಡಿ ಎಂದು ಮತ್ತೆ ಲಿಖಿತ ರೂಪದಲ್ಲಿ ಅರ್ಜಿ ಕೊಟ್ಟೆ. ಮಾ. 29 ರಂದು ಬೆಳಿಗ್ಗೆ ವಿಚಾರಣೆಗೆ ಬರುವಂತೆ ಕರೆ ಬಂತು. ಚಿತ್ರೀಕರಣ ಮಾಡಿದ ಕ್ಯಾಮೆರಾದ ಎಲ್ಲಾ ಎಕ್ವಿಪ್‌ಮೆಂಟ್‌ಗಳನ್ನು ಮದುವೆ ಸಮಾರಂಭವೊಂದಕ್ಕೆ ಕಳುಹಿಸಲಾಗಿದೆ. ಈ ಕಾರಣಕ್ಕೆ 2 ದಿನ ಸಮಯವಕಾಶ ಬೇಕು ಎಂದರು.

ಮೂರನೇ ಶಾಕ್:  ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ನೀಡಬೇಕಾದ ಉತ್ತರವಿದಲ್ಲ. ನನಗೆ ವಿಡಿಯೋ ಬೇಕು ಎಂದು ಮತ್ತೆ ಕೇಳಿದಾಗ ‘ನಿಮ್ಮಿಂದ ನನಗೆ ತೊಂದರೆಯಾಗುತ್ತಿದೆ. ಊಟ, ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಸಮಯವನ್ನು ಹಾಳು ಮಾಡುತ್ತೀದ್ದೀರಾ?’ ಎಂದು ಕಟುವಾಗಿ ಟೀಕಿಸಿದರು ಎಂದು ಮದನ್ ದೂರಿದರು.