ಪ್ರಧಾನಿ ಮೋದಿ ನಾಮಪತ್ರಕ್ಕೆ ತಿರಸ್ಕಾರಕ್ಕೆ ಟಿಎಂಸಿ ಆಗ್ರಹ| ಪ್ರಧಾನಿ ವಿರುದ್ಧ ಕುದುರೆ ವ್ಯಾಪಾರದ ಆರೋಪ| 40 ಟಿಎಂಸಿ ಶಾಸಕರು ತಮ್ಮ ಸಂಪರ್ಕದಲ್ಲಿರುವುದಾಗಿ ಹೇಳಿದ್ದ ಪ್ರಧಾನಿ| ನಾಮಪತ್ರ ತಿರಸ್ಕಾರಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ|
ನವದೆಹಲಿ(ಏ.30): ತಮ್ಮ ಜೊತೆ 40 ಟಿಎಂಸಿ ಶಾಸಕರು ಸಂಪರ್ಕದಲ್ಲಿರುವುದಾಗಿ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ನಾಮಪತ್ರ ತಿರಸ್ಕಾರಕ್ಕೆ ಟಿಎಂಸಿ ಆಗ್ರಹಿಸಿದೆ.
ಖುದ್ದು ಪ್ರಧಾನಿಯೇ ಶಾಸಕರ ಕುದುರೆ ವ್ಯಾಪರಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದಿರುವ ಟಿಎಂಸಿ, ಇಂತಹ ಪ್ರಚೋದನಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ ಪ್ರಧಾನಿ ಮೋದಿ ಅವರ ನಾಮಪತ್ರವನ್ನು ರದ್ದುಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
Scroll to load tweet…
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಟಿಎಂಸಿ, ಅಕ್ರಮ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
ನಿನ್ನೆ(ಏ.29) ಕೋಲ್ಕತ್ತಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಟಿಎಂಸಿಯ 40 ಶಾಸಕರು ತಮ್ಮ ಸಂಪರ್ಕದಲ್ಲಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಅವರೆಲ್ಲರೂ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
