ಕಲಬುರಗಿ (ಮೇ. 16): ಮೊದಲ ಬಾರಿಗೆ ಉಪ ಚುನಾವಣೆಗೆ ಸಾಕ್ಷಿಯಾಗಿರುವ ಚಿಂಚೋಳಿ ಅಖಾಡದಲ್ಲೀಗ ಪಕ್ಷಾಂತರಿಗಳ ನಡುವೆಯೇ ಪೈಪೋಟಿ. ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಉಮೇದುವಾರರಾಗಿ ಸುಭಾಷ್‌ ರಾಠೋಡ ಕಣದಲ್ಲಿದ್ದರೆ, ಮಾಜಿ ಶಾಸಕ ಡಾ.ಉಮೇಶ ಜಾಧವ್‌ ಪುತ್ರ ಡಾ.ಅವಿನಾಶ್‌ ಜಾಧವ್‌ ಇಲ್ಲಿ ಬಿಜೆಪಿ ಹುರಿಯಾಳು.

ಇತ್ತೀಚೆಗೆ ನಡೆದ ಲೋಕಚುನಾವಣೆ ಹೊಸ್ತಿಲಲ್ಲಿ ಸುಭಾಷ್‌ ರಾಠೋಡ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರೆ, ಅದೇ ಹೊತ್ತಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ವಲಸೆ ಬಂದವರು ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್‌. ಇವರ ರಾಜೀನಾಮೆಯಿಂದಾಗಿಯೇ ಚಿಂಚೋಳಿಯಲ್ಲೀಗ ಉಪ ಚುನಾವಣೆ.

ಬಿಜೆಪಿಗೆ ವಲಸೆ ಬಂದ ಜಾಧವ್‌ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾದರು. ತಮ್ಮ ರಾಜೀನಾಮೆಯಿಂದ ತೆರವಾದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪುತ್ರ ಡಾ.ಅವಿನಾಶ್‌ ಅವರನ್ನು ಕಣಕ್ಕಿಳಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿಗೆ ವಲಸೆ ಹೋಗಿ ಕಲಬುರಗಿ ಲೋಕಸಭೆ ಅಖಾಡದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಡ್ಡು ಹೊಡೆದಿದ್ದ ಡಾ.ಉಮೇಶ್‌ ಜಾಧವ್‌ಗೆ ಹೇಗಾದರೂ ಮಾಡಿ ಉಪ ಚುನಾವಣೆಯಲ್ಲಿ ಸೋಲುಣ್ಣಿಸಬೇಕು ಎಂದು ಕಾಂಗ್ರೆಸ್‌ ಸಂಕಲ್ಪಿಸಿದೆ. ಹೀಗಾಗಿ ಜಾಧವ್‌ ಪ್ರತಿನಿಧಿಸುವ ಲಂಬಾಣಿ ಸಮುದಾಯದ ಸುಭಾಷ್‌ ರಾಠೋಡರನ್ನೇ ತನ್ನ ಅಭ್ಯರ್ಥಿಯಾಗಿಸಿದೆ.

ಜಾಧವ್‌ ಪುತ್ರನಿಗಿರುವ ಅವಕಾಶಗಳು

ತಮ್ಮ 11 ಚುನಾವಣೆಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಟಕ್ಕರ್‌ ಕಂಡಿರದ ಮಲ್ಲಿಕಾರ್ಜುನ ಖರ್ಗೆ ತಮ್ಮ 12ನೇ ಚುನಾವಣೆಯಲ್ಲಿ ಅದನ್ನು ಕಾಣುವಂತಾಗಲು ಮೋದಿ ಅಲೆಯ ಜೊತೆಗೇ ಡಾ.ಜಾಧವ್‌ ಬಿಜೆಪಿಗೆ ವಲಸೆ ಹೋಗಿದ್ದೂ ಕಾರಣ ಎಂಬುದು ಗುಟ್ಟೇನಲ್ಲ.

ಈ ಬೆಳವಣಿಗೆ ಖರ್ಗೆ ಹಾಗೂ ಕಾಂಗ್ರೆಸ್‌ಗೆ ಮರೆಯದ ಅನುಭವವಾಯ್ತು. ಹೀಗಾಗಿ ಜಾಧವ್‌ಗೆ ಪಾಠ ಕಲಿಸಲೇಬೇಕು ಎಂದು ಹೊರಟಿರುವ ಕಾಂಗ್ರೆಸ್‌ ಇಲ್ಲಿ ಬಂಜಾರ (35 ಸಾವಿರ), ಪರಿಶಿಷ್ಟಜಾತಿ (40 ಸಾವಿರ), ಮುಸ್ಲಿಂ, ಓಬಿಸಿ ಹಾಗೂ ಲಿಂಗಾಯತ ಮತಗಳನ್ನು ನೆಚ್ಚಿಕೊಂಡಿದೆ.

ಬೋವಿ ಸಮಾಜದ ಮುಖಂಡ ಸುನೀಲ ವಲ್ಯಾಪೂರೆ, ಹೋರಾಟಗಾರ ವೈಜನಾಥ್‌ ಪಾಟೀಲ್‌ರಂತಹ ನಾಯಕರು ಬಿಜೆಪಿಯಲ್ಲಿರುವುದು ಆ ಪಕ್ಷಕ್ಕೆ ಸ್ಥಳೀಯವಾಗಿ ಜನಮತ ಕ್ರೋಢೀಕರಣಕ್ಕೆ ಸಹಕಾರಿಯಾಗಲಿದೆ.

25 ವರ್ಷದ, ಸ್ನಾತಕೋತ್ತರ (ಎಂಡಿ) ವೈದ್ಯ ಪದವಿ ವ್ಯಾಸಂಗ ಮಾಡುತ್ತಿರುವ ಡಾ.ಅವಿನಾಶ್‌ ಜಾಧವ್‌ ರಾಜಕೀಯಕ್ಕೆ ಹೊಸಬರಾದರೂ ತಂದೆಯ ನಾಮಬಲದಲ್ಲೇ ರಾಜಕೀಯಕ್ಕಿಳಿದಿದ್ದಾರೆ. ಅವಿನಾಶ್‌ರಿಗೆ ಮೋದಿ ಅಲೆ, ಬಿಎಸ್‌ವೈ ಬೆಂಬಲ, ಸ್ಥಳೀಯರೆಂಬ ಲೇಬಲ್‌ ಪ್ಲಸ್‌ ಪಾಯಿಂಟ್‌ಗಳು.

ಈ ಸಂಗತಿಗಳಿಗೇ ಒತ್ತು ಕೊಟ್ಟು ಬಿಜೆಪಿ ಪ್ರಚಾರ ನಡೆಸುತ್ತಿದೆ. ರಾಜಕೀಯ ಗೊತ್ತಿಲ್ಲ, ಜನರ ಸಮಸ್ಯೆ ಬಗ್ಗೆ ಅರಿವಿಲ್ಲ, ತಂದೆಯ ನೆರಳಲ್ಲೇ ಇರುವವರು ಎಂಬುದು ಡಾ. ಅವಿನಾಶ್‌ಗಿರುವ ಮೈನಸ್‌ ಪಾಯಿಂಟ್‌.

ರಾಠೋಡ್‌ಗಿರುವ ಅನುಕೂಲಗಳು

ಡಾ.ಜಾಧವ್‌ ನೆಚ್ಚಿಕೊಂಡಿರುವ ಬಂಜಾರ ಸಮುದಾಯದ ಮತಗಳನ್ನು ವಿಭಜಿಸಲೆಂದು ಅದೇ ಸಮುದಾಯಕ್ಕೆ ಸೇರಿರುವ ಸುಭಾಷ್‌ ರಾಠೋಡರನ್ನು ಕಾಂಗ್ರೆಸ್‌ ಇಲ್ಲಿ ಹುರಿಯಾಳಾಗಿಸಿ ರಣತಂತ್ರ ರೂಪಿಸಿದೆ. 90ರ ದಶಕದಲ್ಲಿ ಚಿಂಚೋಳಿಯ ಕೊಂಚಾವರಂ ತಾಂಡಾಗಳಲ್ಲಿ ನಡೆದಂತಹ ಹೆಣ್ಣು ಮಕ್ಕಳ ಮಾರಾಟದ ಪ್ರಕರಣದ ಮೇಲೆ ಬೆಳಕು ಚೆಲ್ಲುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಸುಭಾಷ್‌ ರಾಠೋಡ್‌ ಅಂದಿನಿಂದ ಇಂದಿನವರೆಗೂ ಒಂದಿಲ್ಲೊಂದು ರೂಪದಲ್ಲಿ ಚಿಂಚೋಳಿ ಜನರ ಸಂಪರ್ಕದಲ್ಲಿದ್ದವರು.

ಈ ಜನಪ್ರಿಯತೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ರಾಠೋಡ ಅವರಿಗಿಲ್ಲಿ ಖರ್ಗೆ ನಾಮಬಲ, ಬೆಂಬಲ ದೊರಕಿದೆ. ಜತೆಗೆ ದೋಸ್ತಿ ಸರಕಾರವೇ ಬೀಡು ಬಿಟ್ಟಿರುವುದು ಪ್ಲಸ್‌ ಪಾಯಿಂಟ್‌. ರಾಠೋಡ ಅವರು ಆಳಂದದ ಮಟಕಿತಾಂಡಾದವರು.

ಇವರು ಚಿಂಚೋಳಿ ಕ್ಷೇತ್ರದವರಲ್ಲ ಎಂಬ ಮಾತು ಮೈನಸ್‌ ಪಾಯಿಂಟ್‌. ಸ್ಥಳೀಯನಲ್ಲದಿದ್ದರೇನಂತೆ, ಚಿಂಚೋಳಿ ತಾಂಡಾ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಿದ್ದೇನೆ ಎಂಬ ವಾದ ರಾಠೋಡ ಅವರನ್ನು ಕಾಪಾಡುವುದೇ ಕಾದು ನೋಡಬೇಕು.

ಜಾಧವ್‌, ಖರ್ಗೆ ಪ್ರತಿಷ್ಠೆ

2013 ಹಾಗೂ 2018ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಹುರಿಯಾಳಾಗಿ ಕಣದಲ್ಲಿದ್ದ ಡಾ.ಜಾಧವ್‌ 2 ಬಾರಿಯೂ ಗೆದ್ದವರು. ಲೋಕಸಭೆ ಚುನಾವಣೆಯಲ್ಲಿ ಅವರು ಖರ್ಗೆ ವಿರುದ್ಧ ತೊಡೆ ತಟ್ಟಿದ್ದರು. ಈಗ ಪುತ್ರನನ್ನು ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿಸಿ, ಖರ್ಗೆ ವಿರುದ್ಧ ಜಂಗೀಕುಸ್ತಿಗೆ ಇಳಿದಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ಎರಡರಲ್ಲೂ ಜಾಧವ್‌ ಸಡ್ಡು ಹೊಡೆದಿರುವುದು ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಕಾಂಗ್ರೆಸ್‌ ನಾಯಕರನ್ನು ಕೆರಳಿಸಿದೆ.

ಮೊದಲ ಬಾರಿಗೆ ಉಪಚುನಾವಣೆ

1957ರಿಂದ ಈ ಕ್ಷೇತ್ರದಲ್ಲಿ 14 ಚುನಾವಣೆಗಳು ನಡೆದಿವೆ. ಆದರೆ ಎಂದೂ ಉಪಚುನಾವಣೆ ನಡೆದಿಲ್ಲ. ಇದೇ ಮೊದಲ ಬಾರಿಗೆ ನಡೆಯುತ್ತಿರುವ ಉಪಚುನಾವಣೆಯಿಂದಾಗಿ ಫಲಿತಾಂಶದ ಬಗ್ಗೆ ಕುತೂಹಲ ಕೆರಳಿದೆ. ರಾಜ್ಯಕ್ಕೆ 2 ಬಾರಿ ಮುಖ್ಯಮಂತ್ರಿ ನೀಡಿರುವ ಕ್ಷೇತ್ರ ಎಂಬುದು ಚಿಂಚೋಳಿಗಿರುವ ಹೆಗ್ಗಳಿಕೆ.

ಇಲ್ಲಿಂದ 2 ಬಾರಿ (1967, 1989) ಗೆದ್ದ ವೀರೇಂದ್ರ ಪಾಟೀಲ್‌ ನಾಡಿನ ಮುಖ್ಯಮಂತ್ರಿಯಾಗಿ ಗಮನ ಸೆಳೆದವರು. ಈ ಕ್ಷೇತ್ರದಲ್ಲಿ 11 ಬಾರಿ ಕಾಂಗ್ರೆಸ್‌ ಗೆದ್ದಿದ್ದರು, ಜನತಾದಳ 2 ಬಾರಿ, ಬಿಜೆಪಿ 1 ಬಾರಿ ಒಲಿದಿದೆ.

ಜಾತಿ ಲೆಕ್ಕಾಚಾರ

ಚಿಂಚೋಳಿ ಮೀಸಲು ವಿಧಾನಸಭಾ ಮತ ಕ್ಷೇತ್ರದಲ್ಲಿ 98,802 ಪುರುಷರು, 94,578 ಮಹಿಳೆಯರು 16 ಮಂಗಳ ಮುಖಿಯರು ಸೇರಿದಂತೆ ಒಟ್ಟು 1,93,396 ಮತದಾರರಿದ್ದಾರೆ. ಮಾಜಿ ಸಿಎಂ ವೀರೇಂದ್ರ ಪಾಟೀಲ್‌, ಮಾಜಿ ಮಂತ್ರಿಗಳಾದ ದೇವೇಂದ್ರಪ್ಪ ಘಾಳಪ್ಪ, ವೈಜನಾಥ ಪಾಟೀಲರಂತಹ ಜನನಾಯಕರನ್ನು ನೀಡಿದ ಚಿಂಚೋಳಿ ಕ್ಷೇತ್ರದಲ್ಲಿ ಪರಿಶಿಷ್ಟಜಾತಿ 40 ಸಾವಿರ, ಲಂಬಾಣಿ 30 ಸಾವಿರ, ವೀರಶೈವ- ಲಿಂಗಾಯಿತ 40 ಸಾವಿರ, ಒಬಿಸಿ 35 ಸಾವಿರ, ಮುಸ್ಲಿಂ 10 ಸಾವಿರದಷ್ಟುಮತದಾರರು ಇದ್ದಾರೆ.

ಚಿಂಚೋಳಿ ಕಣದಲ್ಲಿರುವವರು:

ಡಾ.ಅವಿನಾಶ ಜಾಧವ್‌ (ಬಿಜೆಪಿ), ಸುಭಾಷ ರಾಠೋಡ (ಕಾಂಗ್ರೆಸ್‌), ಗೌತಮ ಬಕ್ಕಪ್ಪ (ಬಿಎಸ್ಪಿ), ದೀಪಕ್‌ ಗಂಗಾರಾಮ (ಹಿಂದೂಸ್ತಾನ್‌ ಜನತಾ ಪಾರ್ಟಿ), ಮಾರುತಿ ಭೀಮಶಪ್ಪ (ಬಿಎಂಪಿ), ವಿಜಯ ಜಾಧವ್‌ (ಸರ್ವ ಜನತಾ ಪಾರ್ಟಿ) ಪಕ್ಷೇತರರಾಗಿ ಕೆ.ದೀಪಾ, ನಾಗೇಂದ್ರಪ್ಪ, ಪ್ರವೀಣಕುಮಾರ, ಭಾಗ್ಯ ತಳವಾರ, ಮಲ್ಲಿಕಾರ್ಜುನ ಗಾಜರೆ, ರಮೇಶ, ವಿಶ್ವೇಶ್ವರಯ್ಯ ಭೋವಿ, ಶಾಮರಾವ, ಶಾಮರಾವ, ಶಾಮರಾವ, ಹನುಮಂತ ಕಣದಲ್ಲಿದ್ದಾರೆ.

ಒಟ್ಟು ಮತದಾರರು: 1,93,782

ಪುರುಷ ಮತದಾರರು: 98,994

ಮಹಿಳಾ ಮತದಾರರು: 94,772

2018 ರ ಅಸೆಂಬ್ಲಿ ಚುನಾವಣೆ ಫಲಿತಾಂಶ

ವಿಜೇತ ಅಭ್ಯರ್ಥಿ: ಡಾ.ಉಮೇಶ್‌ ಜಾಧವ್‌ (ಕಾಂಗ್ರೆಸ್‌)- 73905

ಪರಾಜಿತ ಅಭ್ಯರ್ಥಿ: ಸುನೀಲ ವಲ್ಯಾಪೂರೆ (ಬಿಜೆಪಿ)- ಪಡೆದ ಮತಗಳು- 54,693

ಗೆಲುವಿನ ಅಂತರ- 26,060 ಮತಗಳು