ಹಾಸನ[ಏ.09]: ಮಂಡ್ಯದಲ್ಲಿ ಸಚಿವ ಸಿ.ಎಸ್‌. ಪುಟ್ಟರಾಜು ಹಾಗೂ ಕಾಂಗ್ರೆಸ್‌ ಮುಖಂಡ ಜಿ. ಮಾದೇಗೌಡರು ಹಣಕಾಸಿನ ವಿಚಾರವಾಗಿ ಸಂಭಾಷಣೆ ನಡೆಸಿರುವ ಆಡಿಯೋ ಹಸಿಬಿಸಿ ಚರ್ಚೆಯಾಗುತ್ತಿರುವ ವೇಳೆಯಲ್ಲೇ ಹಾಸನ ಶಾಸಕ ಪ್ರೀತಂ ಜೆ.ಗೌಡ ಹಾಸನ ಲೋಕಸಭಾ ಕ್ಷೇತ್ರದ ರಣತಂತ್ರದ ಬಗ್ಗೆ ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

‘ಸಚಿವ ರೇವಣ್ಣನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದರೇ ಈ ಚುನಾವಣೆಯಲ್ಲಿ ಅವರನ್ನು ಸೋಲಿಸಿ. ಆಗ ನಿಮಗೆಲ್ಲ ಗೌರವ ಬರುತ್ತದೆ. ಒಂದು ವೇಳೆ ಅವರೇ (ಪ್ರಜ್ವಲ್‌) ಗೆದ್ದರೆ ಕತೆ ಮುಗೀತು’ ಎಂದು ಶಾಸಕ ಪ್ರೀತಂ ಜೆ.ಗೌಡ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಗರದ ಹೊರ ವಲಯದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡುತ್ತಿರುವ ವಿಡಿಯೋ ಇದಾಗಿದೆ.

‘ಅವರಿಂದ ದುಡ್ಡು ಪಡೆಯಿರಿ, ಬಿಜೆಪಿಗೆ ಮತ ಹಾಕಿಸಿ’

ಚುನಾವಣೆಗಾಗಿ ಈಗ ಪ್ರತಿ ಬೂತ್‌ಗೆ ಒಂದು ಲಕ್ಷ ರು. ಕೊಟ್ಟಿದ್ದಾರೆ. ಸೋತರೆ ಮುಂದಿನ ಬಾರಿ ಐದು ಲಕ್ಷ ರು. ಕೊಡುತ್ತಾರೆ. ನಾವು ನಿಮಗೇ (ಪ್ರಜ್ವಲ್‌ಗೆ) ಅನುಕೂಲ ಮಾಡ್ತಿದ್ದೀವಿ ಎಂದು ಹೇಳಿ ಅವರಿಂದ ದುಡ್ಡು ಪಡೆಯಿರಿ. ಚುನಾವಣೆ ದಿನ ಬಿಜೆಪಿಗೆ ಮತ ಹಾಕಿ. ಭಯ ಹುಟ್ಟಿಸಿದರೆ ಮಾತ್ರ ನಿಮಗೆ ಗೌರವ. ಗ್ರಾಮ ಪಂಚಾಯ್ತಿ ಆಸೆ ಇರುವವನಿಗೆ ಹೀಗಂತ ಹೇಳಿ. ಅವನು ಈಗಲೇ ಯಾರಿಗೂ ಮೂರು ಕಾಸಿನ ಗೌರವ ಕೊಡಲ್ಲ. ಎಲ್ಲರಿಗೂ ಹೋಗೋ ಬಾರೋ ಅಂತಾನೇ ಮಾತನಾಡುತ್ತಾನೆ. ಆ ಹುಡುಗನ ಹತ್ತಿರ ಹೋಗಿ ಕೈಕಟ್ಟಿನಿಲ್ತಿಯಾ ಎಂದು ತಿಳಿಸಿ ಹೇಳಿ. ಈ ರೀತಿ ಜೆಡಿಎಸ್‌ ಕಾರ್ಯಕರ್ತರನ್ನು ಬದಲಾಯಿಸಬೇಕು ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯ್ತಿ ಚಟ ಇಟ್ಟುಕೊಂಡು ಓಡಾಡುವವನಿಗೆ ನಿಂಗೆ ನಾನು ಸಹಾಯ ಮಾಡ್ತೀನಿ, ಈಗ ನಮಗೆ ಸಹಾಯ ಮಾಡಿ ಎಂದು ಮನವರಿಕೆ ಮಾಡಬೇಕು. ಪ್ರಜ್ವಲ್‌ ರೇವಣ್ಣ ಹೆಸರು ಹೇಳದೆ ಕಾರ್ಯಕರ್ತರಿಗೆ ಚುನಾವಣಾ ತಂತ್ರಗಾರಿಕೆಯ ಪಾಠ ಮಾಡಿದ್ದಾರೆ. ಈ ವಿಡಿಯೋನಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನಾರಾಯಣಗೌಡ ಹಾಗೂ ಇತರರು ಇದ್ದಾರೆ.