ಗುವಹಾಟಿ(ಮಾ.16): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಬಿಜೆಪಿಯಲ್ಲಿ ತಳಮಳ ಶುರುವಾಗಿದ್ದು, ಪಕ್ಷ ತ್ಯಜಿಸುತ್ತಿರುವವರ ಪಟ್ಟಿ ಬೆಳೆಯುತ್ತಲೇ ಇದೆ. 

ಉತ್ತರಪ್ರದೇಶದ ಪ್ರಯಾಗರಾಜ್ ಸಂಸದ ಶ್ಯಾಮಾ ಚರಣ್ ಗುಪ್ತಾ ಪಕ್ಷ ತೊರೆದ ಬೆನ್ನಲ್ಲೇ, ಅಸ್ಸಾಂನ ತೇಜ್‌ಪುರ್‌ ಕ್ಷೇತ್ರದ ಬಿಜೆಪಿ ಸಂಸದ ಆರ್‌.ಪಿ.ಶರ್ಮಾ ಕೂಡ ಪಕ್ಷ ತೊರೆದಿದ್ದಾರೆ. 

ಮುಂಬರುವ ಲೋಕಸಭೆ ಚುನಾವಣೆಯ ಸ್ಪರ್ಧಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದಿರುವುದಾಗಿ ಆರ್‌.ಪಿ.ಶರ್ಮಾ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಹಾಗೂ ವಿಎಚ್‌ಪಿಯಲ್ಲಿ 15 ವರ್ಷ ಮತ್ತು ಬಿಜೆಪಿಯಲ್ಲಿ 29 ವರ್ಷ ಸೇವೆ ಸಲ್ಲಿಸಿದ್ದ ಆರ್‌.ಪಿ.ಶರ್ಮಾ, ಕೇವಲ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಇದೇ ಏಪ್ರಿಲ್ 11ರಿಂದ ಒಟ್ಟು 7 ಹಂತಗಳಲ್ಲಿ ಲೋಕಸಭೆಗೆ ದೇಶಾದ್ಯಂತ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಮೇ 23 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಣೆಯಾಗಲಿದೆ.