ಬೆಂಗಳೂರು (ಮಾ. 29):  ತಮಗೆ ಯಾವುದೇ ಕಾರಣ ನೀಡದೆ ಕೊನೆಯ ಕ್ಷಣದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್‌ ತಪ್ಪಿಸಿದ ಪಕ್ಷದ ನಡೆಯಿಂದ ಬೇಸರಗೊಂಡಿರುವ ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಬಿಜೆಪಿಯಿಂದ ಗಂಭೀರವಾಗಿ ನಡೆದಿದೆ.

ಆದರೆ, ತಮಗೆ ಟಿಕೆಟ್‌ ತಪ್ಪಿರುವ ಬಗ್ಗೆ ನಿಖರ ಹಾಗೂ ಸತ್ಯವಾದ ಕಾರಣ ನೀಡಿದರೆ ಮಾತ್ರ ಪಕ್ಷದ ಪರ ಪ್ರಚಾರಕ್ಕೆ ತೆರಳುವ ಬಗ್ಗೆ ಪರಿಶೀಲನೆ ನಡೆಸುವೆ. ಇಲ್ಲದಿದ್ದರೆ ತಟಸ್ಥರಾಗಿ ಉಳಿಯುವೆ ಎಂಬ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ತೇಜಸ್ವಿನಿ ಅವರು ಬೆಂಗಳೂರು ದಕ್ಷಿಣ ಪಕ್ಷದ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಪರ ಪ್ರಚಾರ ನಡೆಸುವುದು ಅನುಮಾನವಾಗಿದೆ.

ಈ ನಡುವೆ ಗುರುವಾರ ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರರಾವ್‌ ಅವರು ಜಯನಗರದಲ್ಲಿರುವ ತೇಜಸ್ವಿನಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಇದೇ ವೇಳೆ ಅವರ ಮನೆಯ ಮುಂಭಾಗದಲ್ಲಿ ಜಮಾವಣೆಗೊಂಡಿದ್ದ ನೂರಾರು ಮಂದಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಮುರಳೀಧರ ರಾವ್‌ ಅವರನ್ನು ಮುತ್ತಿಕೊಂಡು ಟಿಕೆಟ್‌ ತಪ್ಪಿಸಿದ್ದು ಯಾಕೆ ಎಂದು ಖಾರವಾಗಿಯೇ ಪ್ರಶ್ನಿಸಿದರು. ಆ ಬೆಂಬಲಿಗರಿಗೆ ಉತ್ತರ ನೀಡುವಲ್ಲಿ ರಾವ್‌ ಅವರಿಗೆ ಸಾಕಾಯಿತು ಎಂದು ತಿಳಿದು ಬಂದಿದೆ.

ತೇಜಸ್ವಿನಿ ಅವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ ಮುರಳೀಧರರಾವ್‌ ಅವರು, ಈಗ ಆಗಿದ್ದು ಆಗಿ ಹೋಗಿದೆ. ಅದನ್ನೆಲ್ಲ ಮರೆತು ಇದೀಗ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲು ಆಗಮಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಅನಂತಕುಮಾರ್‌ ಅವರ ಸೇವೆಯನ್ನು ಕೊಂಡಾಡಿದ ರಾವ್‌ ಅವರು ತೇಜಸ್ವಿನಿ ಅವರ ಸಾಮಾಜಿಕ ಚಟುವಟಿಕೆಗಳನ್ನೂ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ.

ಕಾರಣ ಕೊಡಿ: ತೇಜಸ್ವಿನಿ ಪಟ್ಟು

ಮುರಳೀಧರರಾವ್‌ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದ ತೇಜಸ್ವಿನಿ ಅವರು ತಮಗಾದ ನೋವನ್ನು ನುಂಗಿಕೊಂಡು, ಕೊನೆಯ ಕ್ಷಣದವರೆಗೂ ನನಗೇ ಟಿಕೆಟ್‌ ನೀಡುವುದಾಗಿ ಹೇಳಿ ನಂತರ ತಪ್ಪಿಸಿದ್ದು ಯಾಕೆ ಎಂಬುದರ ನಿರ್ದಿಷ್ಟಕಾರಣ ಗೊತ್ತಾಗಬೇಕು. ನನಗೆ ಈಗ ರಾಜಕೀಯದಲ್ಲಿ ಆಸಕ್ತಿ ಉಳಿದಿಲ್ಲ. ಅನಂತಕುಮಾರ್‌ ಅವರ ಕನಸಿನ ಕೂಸಾದ ಅದಮ್ಯ ಚೇತನ ಸಂಸ್ಥೆಯ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯಿದೆ ಎನ್ನುವ ಮೂಲಕ ತಾವು ಪ್ರಚಾರಕ್ಕೆ ಬರುವುದಿಲ್ಲ ಎಂಬ ಮಾತನ್ನು ಹೇಳಿದರು ಎಂದು ಮೂಲಗಳು ತಿಳಿಸಿವೆ.