ಬಿಎನ್‌ಎಂ ಕಾಲೇಜಲ್ಲಿ ವಿದ್ಯಾರ್ಥಿಗಳ ಜತೆ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಸಂವಾದ| ದೇಶದ ಭವಿಷ್ಯಕ್ಕಾಗಿ ಕಡ್ಡಾಯ ಮತದಾನ ಮಾಡಿ: ತೇಜಸ್ವಿ ಸೂರ್ಯ ಮನವಿ|

ಬೆಂಗಳೂರು[ಏ.10]: ನಮಗೆ ಮತದಾನ ಎಂಬ ಅತ್ಯಮೂಲ್ಯವಾದ ಕರ್ತವನ್ನು ಭಾರತದ ಸಂವಿಧಾನ ನೀಡಿದೆ. ದೇಶದ ಭವಿಷ್ಯವನ್ನು ನಿರ್ಧರಿಸಬೇಕಾದ ಯುವ ಸಮುದಾಯ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಹುರಿಯಾಳು ತೇಜಸ್ವಿ ಸೂರ್ಯ ಕರೆ ನೀಡಿದ್ದಾರೆ.

ಬನಶಂಕರಿ 2ನೇ ಹಂತದಲ್ಲಿರುವ ಬಿಎನ್ ಎಂ ಕಾಲೇಜಿನಲ್ಲಿ ನಡೆದ ಮಂಗಳವಾರ ವಿದ್ಯಾರ್ಥಿಗಳ ಜತೆ ‘ಯೂತ್ ಆ್ಯಂಡ್ ಲೀಡರ್‌ಶಿಪ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಕೌಶಲ್ಯ ಮತ್ತು ನಾಯಕತ್ವದ ಜತೆ ಯುವ ಸಮೂಹವು ರಾಜಕೀಯ ಪ್ರಜ್ಞೆ ಬೆಳಸಿಕೊಳ್ಳಬೇಕು ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುವಕರಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡಿದ್ದಾರೆ. ಯುವ ಸಮುದಾಯವು ರಾಜಕೀಯ ಪ್ರವೇಶಿಸಲು ಸಕಾಲವೆಂದು ಅವರು ಕರೆ ಕೊಟ್ಟಿದ್ದಾರೆ. ಭಾರತದಲ್ಲಿ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದ ನಂತರವಷ್ಟೆ ಸರ್ಕಾರಗಳು ಬದಲಾದವು ಎಂದು ಹೇಳಿದರು.

ಸಮಾಜದ ಮುಖ್ಯವಾಹಿನಿಯೊಂದಿಗೆ ತನ್ನ ಸಂಪರ್ಕವನ್ನು ಯುವ ಸಮೂಹ ಕಳೆದು ಕೊಂಡಾಗ ದೇಶ ಕತ್ತಲುಮಯವಾಗುತ್ತದೆ. ನರೇಂದ್ರ ಮೋದಿ ಅವರಿಂದಾಗಿ ಐದು ವರ್ಷಗಳಲ್ಲಿ ಯುವಕರಲ್ಲಿ ಹೊಸ ಕ್ರಾಂತಿಯೇ ಆಗಿದೆ ಎಂದು ಶ್ಲಾಘಿಸಿದರು.

ಎನ್‌ಡಿಎ ಸರ್ಕಾರದ ಆರ್ಥಿಕ ನೀತಿಗಳಿಂದಲೇ ಹಣದುಬ್ಬರ ಒಂದಂಕಿಗೆ ಬಂದು ನಿಂತಿದೆ. ಮೇಡ್ ಇನ್ ಚೀನಾ ಬದಲು ಮೇಡ್ ಇನ್ ಇಂಡಿಯಾದ ಮುದ್ರೆಗಳು ಕಾಣಿಸುತ್ತಿವೆ. ದೇಶದ ಶೇ.70ರಷ್ಟು ಜನರಿಗೆ ಬ್ಯಾಂಕ್ ಖಾತೆಗಳು ತೆರೆಯಲ್ಪಟ್ಟವು. ಬಯಲು ಮುಕ್ತ ಶೌಚಾಲಯದ ಹೆಸರಿನಲ್ಲಿ ಬಹುದೊಡ್ಡ ಕಾಂತ್ರಿ ನಡೆದಿದೆ ಎಂದು ಹೊಗಳಿದರು.

ಉಗ್ರರ ದಾಳಿಯನ್ನು ಮ್ಯಾಚ್ ಫಿಕ್ಸಿಂಗ್ ಎಂದು ಕರೆಯುವ ಜನ ನಮಗೆ ಬೇಕಾಗಿಲ್ಲ. ನಮಗೆ ಬೇಕಿರುವುದು ಸೇನೆಯನ್ನು ಗೌರವಿಸುವ ಜನರು ಎಂದು ಹೇಳಿದರು.