ಪಾಟ್ನಾ(ಮೇ.03): ರಾಜಕಾರಣವೇ ಹಾಗೆ, ಒಂದೇ ರಕ್ತ ಹಂಚಿಕೊಂಡು ಹುಟ್ಟಿದ್ದ ಅಣ್ತಮ್ಮಂದಿರನ್ನೂ ದಾಯಾದಿಗಳನ್ನಾಗಿ ಪರಿವರ್ತಿಸುವ ಶಕ್ತಿ ಅದಕ್ಕಿದೆ. ದಶಕಗಳ ಕಾಲ ಬಿಹಾರವನ್ನಾಳಿದ ಆರ್‌ಜೆಡಿ ಮುಖ್ಯಸ್ಥ, ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಮನೆಯಲ್ಲೂ ಇಂತದ್ದೇ ದ್ವೇಷದ ವಾತಾವರಣ ಹೊಗೆಯಾಡುತ್ತಿದೆ.

ಹೌದು, 'ಜಬ್ ತಕ್ ರಹೇಗಾ ಸಮೋಸೆ ಮೇ ಆಲೂ, ತಬ್ ತಕ್ ರಹೇಗಾ ಬಿಹಾರ್ ಮೇ ಲಾಲೂ..' ಅಂತಾ ಜಂಭದಿಂದ ರಾಜ್ಯವಾಳಿದ ಲಾಲೂ ಪ್ರಸಾದ್‌ ಯಾದವ್, ಇದೀಗ ಮೇವು ಹಗರಣದಲ್ಲಿ ಜೈಲು ಪಾಲಾಗಿದ್ದಾರೆ.

ಅತ್ತ ಲಾಲೂ ಜೈಲು ಸೇರುತ್ತಿದ್ದಂತೇ ಇತ್ತ ಲಾಲೂ ಕುಟುಂಬದಲ್ಲಿ ಬಿರುಕು ಮೂಡಲಾರಂಭಿಸಿದೆ. ತಂದೆ ಇರೋ ತನಕ ರಾಮ-ಲಕ್ಷ್ಮಣರ ಹಾಗೆ ಪೋಸ್ ಕೊಡುತ್ತಿದ್ದ ಲಾಲೂ ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್, ಇದೀಗ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ.

ಲಾಲೂ ಜೈಲು ಪಾಲಾದ ಬಳಿಕ ಆರ್‌ಜೆಡಿ ನೊಗ ಹೊತ್ತಿರುವ ತೇಜಸ್ವಿ ಯಾದವ್ ಒಂದೆಡೆಯಾದರೆ, ತನ್ನನ್ನು ಕಡೆಗಣಿಸಲಾಗುತ್ತಿದೆ ಎಂಬ ಹೆದರಿಕೆಯಲ್ಲಿ ತೇಜ್ ಪ್ರತಾಪ್ ನರಳುತ್ತಿದ್ದಾರೆ. 

ಕಳೆದ ಕೆಲವು ದಿನಗಳಿಂದ ಸಹೋದರರ ಸವಾಲ್ ಆರಂಭವಾಗಿದ್ದು, ಅಣ್ತಮ್ಮಂದಿರ ಜಗಳ ಕಂಡು ತಾಯಿ, ಬಿಹಾರ ಮಾಜಿ ಸಿಎಂ ರಾಬ್ಡಿ ದೇವಿ ಕೂಡ 'ಲಾಲೂ ತುಮ್ ಕಬ್ ಆವೋಗೆ' ಅಂತಾ ಕಣ್ಣೀರಿಡುತ್ತಿದ್ದಾರೆ.

ಹಗೆತನದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸಹೋದರ ತೇಜ್ ಪ್ರತಾಪ್ ಯಾದವ್, 'ನಾನು ಬಿಹಾರದ ಎರಡನೇ ಲಾಲೂ ಯಾದವ್..'ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಪತ್ನಿ ಐಶ್ವರ್ಯ ಅವರಿಗೆ ವಿಚ್ಛೇದನೆ ನೀಡಿ, ಮಾನಸಿಕವಾಗಿಯೂ ತುಸು ಜರ್ಜರಿತರಾದಂತೆ ಇರುವ ತೇಜ್ ಪ್ರತಾಪ್ ಯಾದವ್ , ಕುಟುಂಬ ಮತ್ತು ಪಕ್ಷದಲ್ಲಿ ಮತ್ತೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ.

ಅಣ್ತಮ್ಮಂದಿರ ಈ ದಾಯಾದಿ ಕಲಹ ಆರ್‌ಜೆಡಿ ಮತ್ತು ಲಾಲೂ ವ್ಯಕ್ತಿತ್ವಕ್ಕೆ ಏನು ಧಕ್ಕೆ ತರಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ