ತಿರುವಲ್ಲೂರು[ಏ.18]: ಚೆನ್ನೈನಿಂದ ಮೂರು ವ್ಯಾನ್‌ಗಳಲ್ಲಿ ಕೊಂಡೊಯ್ಯುತ್ತಿದ್ದ ಸುಮಾರು 1300 ಕೆಜಿ ಚಿನ್ನದ ಬಾರ್‌ಗಳನ್ನು ಚುನಾವಣಾ ಅಧಿಕಾರಿಗಳು ಬುಧವಾರ ಇಲ್ಲಿ ವಶಪಡಿಸಿಕೊಂಡಿದ್ದಾರೆ. 

ಸಾಮಾನ್ಯ ವಾಹನ ತಪಾಸಣೆ ವೇಳೆ ಮೂರು ವ್ಯಾನ್‌ಗಳಲ್ಲಿ ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ. ವಿಚಾರಣೆ ವೇಳೆ ಇದು ತಿರುಪತಿ ತಿಮ್ಮಪ್ಪ ದೇಗುಲದ ಉಸ್ತುವಾರಿ ಹೊಂದಿರುವ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಸೇರಿದ್ದು. ಇದನ್ನು ಚೆನ್ನೈನ ರಾಷ್ಟ್ರೀಯ ಬ್ಯಾಂಕ್‌ ಒಂದರಿಂದ ತೆಗೆದುಕೊಂಡು ಬರಲಾಗುತ್ತಿತ್ತು ಎಂದು ವ್ಯಾನ್‌ನಲ್ಲಿದ್ದ ವ್ಯಕ್ತಿಗಳು ಹೇಳಿದ್ದಾರೆ. ಆದರೂ ಈ ಹೇಳಿಕೆಯ ಸತ್ಯಾಸತ್ಯತೆ ಪರೀಕ್ಷೆ ನಿಟ್ಟಿನಲ್ಲಿ ವಾಹನಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಚುನಾವಣಾಧಿಕಾರಿಗಳು 1300 ಕೋಟಿ ರು. ಮೌಲ್ಯದ ಚಿನ್ನಾಭರಣ ವಶಪಡಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡಿನ ಮುಖ್ಯ ಚುನಾವಣಾಧಿಕಾರಿ ಸತ್ಯಬ್ರಾತಾ ಸಾಹೂ ಅವರು, ಈ ಬಗ್ಗೆ ಹಲವು ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ ಎಂದು ಹೇಳಿದರು. ಇನ್ನು ಈ ಬಗ್ಗೆ ತಮ್ಮ ಹೇಳಿಕೆ ನೀಡುವಂತೆ ಟಿಟಿಡಿಗೆ ಪಿಟಿಐ ಕೋರಿದ್ದು, ಈ ಚಿನ್ನಾಭರಣಗಳು ಬ್ಯಾಂಕ್‌ನ ಜವಾಬ್ದಾರಿಯಾದ್ದರಿಂದ ಈ ಬಗ್ಗೆ ಏನೂ ಹೇಳಲ್ಲ ಎಂದು ಹೇಳಿದೆ. ಚಿನ್ನ ವಶ ಸುದ್ದಿ ಭಾರೀ ಸದ್ದು ಮಾಡಿದ ಬೆನ್ನಲ್ಲೇ, ಇದು ದೇಗುಲಕ್ಕೆ ಸೇರಿದ ಚಿನ್ನ, ಇದನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ದೇಗುಲದ ಖಜಾನೆಗೆ ಸಾಗಿಸಲಾಗುತ್ತಿತ್ತು ಎಂದು ಟಿಟಿಡಿ ಮೂಲಗಳು ತಿಳಿಸಿವೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.